ಅಳೇಹಳ್ಳಿ (ಎನ್.ಆರ್.ಪುರ): ರೈತರು ಪುನರುತ್ಪಾದಕ ಕಾಫಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಎಸ್.ಎಂ. ಸೇಹಗಲ್ ಫೌಂಡೇಷನ್‌ನ ಸುಮಂತ್ ಹೇಳಿದರು.
ಬಾಳೆ ಗ್ರಾ.ಪಂ. ವ್ಯಾಪ್ತಿಯ ಅಳೇಹಳ್ಳಿಯಲ್ಲಿ ಮಂಗಳವಾರ ಗ್ರಾಮದ ಸಣ್ಣ ಪ್ರಮಾಣದಲ್ಲಿ ಕಾಫಿ ಬೆಳೆಯುವ ರೈತರಿಗೆ ಎಸ್.ಎಂ. ಸೇಹಗಲ್ ಫೌಂಡೇಷನ್ ವತಿಯಿಂದ ಮಣ್ಣಿನ ಪರೀಕ್ಷೆಯ ಮಹತ್ವದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪುನುರುತ್ಪಾದಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ರೈತರಿಗೆ ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ, ತಮ್ಮ ತೋಟದಲ್ಲಿಯೇ ಸಿಗುವ ತ್ಯಾಜ್ಯ, ಎಲೆ ಇತ್ಯಾದಿಗಳನ್ನು ಬಳಸಿಕೊಂಡು ಬೆಳೆಗೆ ಬೇಕಾಗುವ ಎನ್‌ಪಿಕೆ ಹಾಗೂ ಲಘು ಪೋಷಕಾಂಶಗಳನ್ನು ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸುವ ಉದ್ದೇಶ ಹೊಂದಿದೆ. ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮುಖ್ಯವಾಗಿದ್ದು, ಮಣ್ಣನ್ನು ಕಾಪಾಡುವ ಜವಾಬ್ದಾರಿ ರೈತರದ್ದಾಗಿರುತ್ತದೆ. ಉಚಿತ ಮಣ್ಣಿನ ಪರೀಕ್ಷೆ ಸದರಿ ಸಂಸ್ಥೆಯ ಐಸಿಸಿಆರ್‌ಎಲ್ ಕಾರ್ಯಕ್ರಮಗಳ ಒಂದು ಭಾಗವಾಗಿದೆ’ ಎಂದರು.
ಸ್ಥಳೀಯರಾದ ರಾಜೇಶ್, ಕೌಶಲ್ಯ, ಶ್ರೀಕಾಂತ್, ಶಿವಾನಂದ್, ರೈತರು ಇದ್ದರು. ರೈತರಿಂದ ತಮ್ಮ ಜಮೀನಿನ ಮಣ್ಣನ್ನು ಪಡೆದು ಮಣ್ಣಿನ ಪರೀಕ್ಷೆ ನಡೆಸಲಾಗಿತ್ತು. ಇದರ ಪರೀಕ್ಷಾ ಪತ್ರವನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.