ADVERTISEMENT

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ

ಅಜ್ಜಂಪುರ ಜನಸಂಪರ್ಕ ಸಭೆಯಲ್ಲಿ ಎಸ್ಪಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 4:49 IST
Last Updated 11 ನವೆಂಬರ್ 2022, 4:49 IST
ಅಜ್ಜಂಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಅಜ್ಜಂಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.   

ಅಜ್ಜಂಪುರ: ‘ಅನಧಿಕೃತ ಪಾರ್ಕಿಂಗ್ ತಡೆ, ವಾಹನ ದಟ್ಟಣೆ ನಿಯಂತ್ರಣ, ರಾತ್ರಿ ಬೀಟ್ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ಪಟ್ಟಣದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ‘ಜನ ಸಂಪರ್ಕ’ ಸಭೆಯಲ್ಲಿ ಅಹವಾಲು ಸ್ವೀಕರಿಸಿ, ಅವರು ಮಾತನಾಡಿದರು.

ಒಟ್ಟಾರೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ 15 ಅರ್ಜಿ ಸಲ್ಲಿಕೆಯಾಗಿದ್ದು, ನಮ್ಮ ವ್ಯಾಪ್ತಿಯ ಅರ್ಜಿಯನ್ನು ಪರಿಶೀಲಿಸುತ್ತೇವೆ. ಸಿಬ್ಬಂದಿ, ತಪ್ಪೆಸಗಿದ್ದರೆ ವಿಚಾರಣೆಗೆ ಒಳಪಡಿಸಿ, ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು.

ADVERTISEMENT

ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿದೆ. ನೊಂದವರು, ಬಾಧಿತರು ಠಾಣೆಯಲ್ಲಿ ಮುಕ್ತವಾಗಿ ದೂರು ಸಲ್ಲಿಸಬಹುದು. ದೌರ್ಜನ್ಯ, ಶೋಷಣೆಗೆ ಒಳಗಾದ ಸಂತ್ರಸ್ತರು ಸಮಸ್ಯೆ ತೋಡಿಕೊಳ್ಳಬಹುದು. ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವ ದ್ವಿ-ಚಕ್ರ ಪಾರ್ಕಿಂಗ್ ತಡೆಯುವಂತೆ ವೆಂಕಟೇಶ್ ಮನವಿ ಮಾಡಿದರು.

‘ಗಾಂಧಿ ವೃತ್ತ- ಬಸ್ ನಿಲ್ದಾಣ- ರೈಲ್ವೆ ಗೇಟ್ ವರೆಗೆ ಹಾಗೂ ಬಸ್ ನಿಲ್ದಾಣ-ಸಮುದಾಯ ಆರೋಗ್ಯ ಕೇಂದ್ರದವರೆಗೆ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ವಾಹನ ಮತ್ತು ಆಂಬುಲೆನ್ಸ್, ಪಾದಾಚಾರಿಗಳು ಸಾಗಲು ಅಡ್ಡಿ ಉಂಟು
ಮಾಡುತ್ತಿದೆ. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ’ ಎಂದು ಮಸೂದ್ ಅಹಮದ್ ಮನವಿ ಮಾಡಿದರು.

ಅಂತರಘಟ್ಟೆ, ಬೇಗೂರು, ಗೌರಾಪುರ, ಚನ್ನಾಪುರ ದಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆ. ಗ್ರಾಮ ಪರಿಮಿತಿಯಲ್ಲಿ ವಾಹನ ವೇಗ ನಿಯಂತ್ರಣಕ್ಕೆ ಬ್ಯಾರಿಕೇಡ್ ಹಾಕಿಸಿ, ರಸ್ತೆ ಉಬ್ಬು ನಿರ್ಮಿಸಿ ಎಂದು ಚನ್ನಾಪುರದ ಸಿದ್ದೇಗೌಡ ಮನವಿ ಸಲ್ಲಿಸಿದರು.

ಡಿಎಸ್ಪಿ ನಾಗರಾಜ್, ಪ್ರಭಾರಿ ಇನ್ ಸ್ಪೆಕ್ಟರ್ ಗುರುಪ್ರಸಾದ್, ಪಿಎಸ್ಐ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.