ಆಲ್ದೂರು: ಪಟ್ಟಣದ ಸಮೀಪದ ಬಿರಂಜಿ ಹೊಳೆಯ ಪಕ್ಕದ ಜಾಗದ ವಿವಾದವು ಒಕ್ಕಲಿಗ ಮತ್ತು ಪರಿಶಿಷ್ಟ ಜಾತಿಯ ಮುಖಂಡರ ನಡುವೆ ಜಟಾಪಟಿಗೆ ಕಾರಣವಾಯಿತು. ವಿವಾದಿತ ಜಾಗದಲ್ಲಿ ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಮುಂದಾದಾಗ ಒಕ್ಕಲಿಗ ಸಮುದಾಯ ಮಹಿಳೆಯೊಬ್ಬರು ಗುಂಡಿಗೆ ಇಳಿದು ಪ್ರತಿರೋಧ ವ್ಯಕ್ತಪಡಿಸಿದರು.
ಸರ್ವೇ ನಂಬರ್ 108ರಲ್ಲಿ 2 ಎಕರೆ 32 ಗುಂಟೆ ಜಮೀನು ಪರಿಶಿಷ್ಟ ಜಾತಿಯ ಸ್ಮಶಾನ ಎಂದು ಪಹಣಿಯಲ್ಲಿದೆ. ಇದೇ ಜಾಗವನ್ನು ಗ್ರಾಮ ಪಂಚಾಯಿತಿಯಲ್ಲಿ ಒಕ್ಕಲಿಗ ಸಮುದಾಯ ಭವನ ಎಂದು 2013ರಲ್ಲಿ ನಿರ್ಣಯ ದಾಖಲಿಸಲಾಗಿದೆ. ಇದು ಎರಡು ಸಮುದಾಯಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
‘ನಮ್ಮ ಸಮುದಾಯ ಸ್ಮಶಾನ ಭೂಮಿಯನ್ನು ಕೆಲವು ಪ್ರಭಾವಿಗಳು ಗ್ರಾಮ ಪಂಚಾಯಿತಿಯಲ್ಲಿ ಒಕ್ಕಲಿಗರ ಸಮುದಾಯ ಭವನ ಎಂದು ಬರೆಸುವ ಮೂಲಕ ಸಮಸ್ಯೆ ಉಂಟು ಮಾಡಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಸಭೆಗಳಲ್ಲಿ ಹಲವು ಬಾರಿ ವಿಷಯ ಪ್ರಸ್ತಾಪಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ’ ಎಂಬುದು ದಲಿತ ಮುಖಂಡರ ಆರೋಪ.
ಶಿವಪ್ಪ ಅವರ ತಾಯಿ ರಾಮಮ್ಮ ಶುಕ್ರವಾರ ಮೃತಪಟ್ಟಿದ್ದು, ಶವಸಂಸ್ಕಾರ ಮಾಡಲು ಮುಂದಾದರು. ಈ ವೇಳೆ ಒಕ್ಕಲಿಗ ಸಮುದಾಯದ ಮುಖಂಡರು ಅಡ್ಡಿಪಡಿಸಿದರು.
ಸ್ಥಳಕ್ಕೆ ಬಂದ ತಹಶಿಲ್ದಾರ್ ಸುಮಂತ್, ‘ಜಮೀನು ವಿವಾದ ನ್ಯಾಯಾಲಯದಲ್ಲಿ ಇದೆ. ಸರ್ವೆ ಮಾಡಿಸಿದ ಬಳಿಕ ಸ್ಪಷ್ಟ ಮಾಹಿತಿ ದೊರಕಲಿದೆ. ಆ ತನಕ ಎರಡು ಸಮುದಾಯದವರು ಸುಮ್ಮನಿರಬೇಕು’ ಎಂದು ತಿಳಿಸಿದರು.
ಈ ವೇಳೆ ವಾಗ್ವಾದ ಹೆಚ್ಚಾಯಿತು. ತೆಗೆದಿದ್ದ ಗುಂಡಿಯೊಳಗೆ ಶವ ಇಳಿಸಲು ದಲಿತರು ಮುಂದಾದರು. ಈ ವೇಳೆ ಒಕ್ಕಲಿಗ ಸಮುದಾಯದ ಪೂರ್ಣಿಮಾ ಸುದೀನ್ ಎಂಬುವರು ಗುಂಡಿಯೊಳಗೆ ಇಳಿದರು. ಶವ ಹೂಳದಂತೆ ಅಡ್ಡಿಪಡಿಸಿದರು. ಪರಿಶಿಷ್ಟ ಸಮುದಾಯದ ಮಹಿಳೆಯರು ಅವರನ್ನು ಮೇಲಕ್ಕೆ ಎಳೆದು ಬಿಟ್ಟರು. ಈ ವೇಳ ಮಾತಿನ ಚಕಮಕಿ ಘರ್ಷಣೆ ಉಂಟಾಯಿತು. ಬಳಿಕ ಅಂತ್ಯ ಸಂಸ್ಕಾರ ನೆರವೇರಿತು.
ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜು ಮಾತನಾಡಿ, ‘50 ರಿಂದ 60 ವರ್ಷಗಳ ಹಿಂದೆ ಚಿಕ್ಕಮಾಗರವಳ್ಳಿ ಸರ್ವೆ ನಂಬರ್ 108ರಲ್ಲಿ ಪರಿಶಿಷ್ಟ ಜಾತಿಯವರ ಸ್ಮಶಾನಕ್ಕೆ ಜಾಗ ಮಂಜೂರಾಗಿತ್ತು. ಇದೇ ಜಾಗದಲ್ಲಿ ಚಿಕ್ಕಮಗಳೂರು ರಸ್ತೆಯ ಸಂಪರ್ಕ ಸೇತುವೆ ನಿರ್ಮಿಸಲಾಗಿದೆ. ಉಳಿದ ಜಾಗವನ್ನು ಗ್ರಾಮ ಪಂಚಾಯಿತಿಯಲ್ಲಿ ಕೆಲವು ಪ್ರಭಾವಿ ಸದಸ್ಯರುಗಳು ಒಕ್ಕಲಿಗ ಸಮುದಾಯಭವನ ಎಂದು ಬರೆಸಿದ್ದಾರೆ’ ಎಂದು ದೂರಿದರು.
ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ‘ಒಕ್ಕಲಿಗ ಸಮುದಾಯ ಭವನಕ್ಕೆಂದು 170 ಅಡಿ ಅಗಲ ಮತ್ತು 300 ಅಡಿ ಉದ್ದದ ನಿವೇಶನ ಕಾಯ್ದಿರಿಸಲಾಗಿದೆ. ಈ ಜಾಗದಲ್ಲಿ ಯಾರೂ ಅಂತ್ಯ ಸಂಸ್ಕಾರ ಮಾಡುತ್ತಿರಲಿಲ್ಲ. ಪರಿಶಿಷ್ಟರಿಗೆ ಬೇರೆಡೆ ಪರ್ಯಾಯ ಜಾಗ ಸೂಚಿಸಿದ್ದ ಕಾರಣ ಒಕ್ಕಲಿಗ ಸಮುದಾಯದಿಂದ ₹5 ಲಕ್ಷ ವೆಚ್ಚಮಾಡಿ ಜಾಗ ಸಮತಟ್ಟು ಮಾಡಲಾಗಿದೆ. ಈಗ ಉದ್ದೇಶಪೂರ್ವಕವಾಗಿ ಕೆಲವು ಸಂಘಟನೆಗಳು ವಿವಾದ ಉಂಟು ಮಾಡಿವೆ’ ಎಂದರು.
ಶವ ಸಂಸ್ಕಾರ ನಡೆಸಿದ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಆಮಟೆ, ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.
ಘರ್ಷಣೆ ಸಂಬಂಧ ಪರಿಶಿಷ್ಟ ಸಮುದಾಯದ ಪಂಚಾಯಿತಿ ಸದಸ್ಯೆ ಲಕ್ಷ್ಮಿ ಹಾಗೂ ಒಕ್ಕಲಿಗ ಸಮುದಾಯದ ಪೂರ್ಣಿಮಾ ಸುದೀನ್ ಪರಸ್ಪರ ಹಲ್ಲೆಯ ದೂರು ನೀಡಿದ್ದು, ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.