ಆಲ್ದೂರು: ಪಟ್ಟಣದ ಬ್ಯಾಂಕ್ ಆಫ್ ಬರೋಡ ಸಮೀಪದ ಶಾದಿ ಮಹಲ್ ಸಭಾಂಗಣದಲ್ಲಿ ಸೋಮವಾರ ನಡೆದ ’ಕಾಫಿನಾಡು ಹಬ್ಬ’ವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರ ತಾಯಿ ಹೊನ್ನಮ್ಮ ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಮಾತನಾಡಿ, ’ಇಂತಹ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮನ್ನು ಚಟುವಟಿಕೆಯಿಂದ ತೊಡಗಿಸಿಕೊಳ್ಳಲು ಸಾಧ್ಯ’ ಎಂದರು.
‘ಕಾಫಿನಾಡು ಹಬ್ಬದಲ್ಲಿ ಮಹಿಳೆಯರು ಮನೆಯಲ್ಲಿ ತಯಾರಿಸಿರುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಮಹಿಳಾ ಆರ್ಥಿಕ ಸಬಲೀಕರಣಕ್ಕೂ ಇದು ವೇದಿಕೆ ಒದಗಿಸಿದೆ’ ಎಂದರು.
ಆಯೋಜಕರಾದ ಪ್ರೀತಿ ಮಾತನಾಡಿ, ‘ಗೆಳತಿಯರ ಬಳಗದಿಂದ ಕಾರ್ಯಕ್ರಮ ಆಯೋಜಿಸಿದ್ದು, ‘ಕರಕುಶಲ ವಸ್ತುಗಳು, ವಸ್ತ್ರಗಳು, ಚನ್ನಪಟ್ಟಣದ ಗೊಂಬೆ, ಪುಸ್ತಕಗಳು, ವಿವಿಧ ತಳಿಯ ಹಣ್ಣಿನ ಸಸಿಗಳು, ಆರ್ಟಿಫಿಶಿಯಲ್ ಒಡವೆಗಳು ಸೇರಿ ಹಲವು ವಸ್ತುಗಳ ಮಳಿಗೆಗಳನ್ನು ತೆರೆದು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
ಸಿ.ಟಿ ರವಿ ಅವರ ಸಹೋದರಿ ರೇವತಿ ಮಾತನಾಡಿ, ‘ಬಾಳೆಹೊನ್ನೂರಿನಲ್ಲಿ ಮೂರು ವರ್ಷಗಳಿಂದ ಸತತವಾಗಿ ಕಾಫಿ ನಾಡು ಹಬ್ಬ ನಡೆಯುತ್ತಿದೆ. ಈ ಬಾರಿ ಆಲ್ದೂರಿನಲ್ಲಿ ಆಯೋಜಿಸಿದ್ದೇವೆ. ಹಬ್ಬದಲ್ಲಿ ಮಲೆನಾಡಿನ ವಿವಿಧ ಬಗೆಯ ಆಹಾರಗಳು, ಔಷಧಗಳೂ ಲಭ್ಯವಿದೆ. ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ’ ಎಂದರು.
ಆಯೋಜಕರಾದ ಸುಧಾ ಮಲ್ಲೇಶ್, ಜ್ಯೋತಿ, ಮಾಲಾ, ಪಿಎಸ್ಐ ಬಿ.ಎ.ರವಿ, ಒಕ್ಕಲಿಗ ಸಂಘದ ವಲಯ ಘಟಕದ ಅಧ್ಯಕ್ಷ ಅಶೋಕ್ ಡಿ.ಬಿ, ಬ್ಯಾರಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಯು, ಇಬ್ರಾಹಿಂ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.