
ಆಲ್ದೂರು: ಮಲೆನಾಡಿನಲ್ಲಿ ಮಳೆಯ ಬಿರುಸು ಇನ್ನೂ ಕ್ಷೀಣವಾಗದೆ ಇರುವುದರಿಂದ ರಸ್ತೆಗಳು ಹದಗೆಡುತ್ತಲೇ ಇವೆ. ಹದಗೆಟ್ಟ ಹೆದ್ದಾರಿ ದುರಸ್ತಿ ಮತ್ತು ನೂತನ ಕಾಮಗಾರಿ ಆರಂಭಿಸಲು ಮಳೆ ಅಡ್ಡಿಯಾಗಿದೆ. ಮಳೆ ಯಾವಾಗ ಕಡಿಮೆಯಾಗುತ್ತದೆ, ರಸ್ತೆ ದುರಸ್ತಿ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡತೊಡಗಿದೆ.
ಆಲ್ದೂರು ಸುತ್ತಮುತ್ತ ಹೋಬಳಿಗಳ ರಸ್ತೆಗಳು ಹದಗೆಟ್ಟಿದ್ದು, ಚಿಕ್ಕಮಗಳೂರಿನಿಂದ ಆಲ್ದೂರು ಮಾರ್ಗವಾಗಿ ಹಾದುಹೋಗುವ ರಾಜ್ಯ ಹೆದ್ದಾರಿ 27 ಮತ್ತು ಆಲ್ದೂರಿನಿಂದ ಹಾಂದಿ ವರೆಗೆ ಸಾಗಿ ರಾಷ್ಟ್ರೀಯ ಹೆದ್ದಾರಿ 173 ಸಂಪರ್ಕಿಸುವ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದೆ.
ಆಲ್ದೂರು ಮಾರ್ಗದ ರಸ್ತೆಯು ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರಗಳಾದ ಶೃಂಗೇರಿ, ಕೊಪ್ಪ ಹರಿಹರಪುರ, ಬಾಳೆಹೊನ್ನೂರು, ರಂಭಾಪುರಿ ಪೀಠ, ಹೊರನಾಡನ್ನು ಬೆಸೆಯುತ್ತದೆ. ನೈಸರ್ಗಿಕ ಜಲಪಾತಗಳ ಸೌಂದರ್ಯವನ್ನು ಸವಿಯಲು ಜಿಲ್ಲೆ, ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ವರ್ಷದಲ್ಲಿ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಹದಗೆಟ್ಟ ರಸ್ತೆಯಲ್ಲಿ ಓಡಾಡುವುದು ಪ್ರವಾಸಿಗರಿಗೆ ಪ್ರಯಾಸದಾಯಕವಾಗಿ ಪರಿಣಮಿಸಿದೆ.
ಆಲ್ದೂರಿನಿಂದ ಚಿಕ್ಕಮಗಳೂರಿಗೆ 18 ಕಿ.ಮೀ., ಮೂಡಿಗೆರೆಗೆ 17 ಕಿ.ಮೀ ದೂರ ಇದೆ. ಶೃಂಗೇರಿ, ತಾಲ್ಲೂಕು ಕೇಂದ್ರಕ್ಕೆ 72 ಕಿ.ಮೀ ಇದ್ದು, ಸಂಚಾರಕ್ಕೆ ಯೋಗ್ಯವಲ್ಲದ ಗುಂಡಿಮಯ ರಸ್ತೆಯಲ್ಲಿ ಪ್ರತಿದಿನವೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡಲು ತೊಂದರೆ ಆಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಬೇಕಾಗುತ್ತದೆ. ಆದರೆ, ಈ ರಸ್ತೆಯ ಸ್ಥಿತಿ ಹದಗೆಟ್ಟಿರುವುದರಿಂದ ವೇಗವಾಗಿ ವಾಹನ ಚಲಾಯಿಸಲಾಗದು. ಅಧಿಕಾರಿ, ಜನಪ್ರತಿನಿಧಿಗಳು ಸರಿಯಾದ ಯೋಜನೆ ರೂಪಿಸಿ ಗಮನಹರಿಸಿದ್ದರೆ ಈ ರೀತಿಯ ಸಮಸ್ಯೆ ಎದುರಾಗುತ್ತಿರಲಿಲ್ಲ. ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ಜನರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಮೂರ್ತಿ ಕೆ., ಅರವಿಂದ್ ಬಿ.ಪಿ.
ಶಾಸಕಿ ನಯನ ಕೆಲ ದಿನಗಳ ಹಿಂದೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದಾಗ ಸ್ಥಳೀಯರು, ‘ಮೊದಲು ರಸ್ತೆ ಬದಿಯಲ್ಲಿ ಮಳೆ ನೀರು ಹರಿಯಲು ಸ್ಥಳಾವಕಾಶ ಇಲ್ಲ. ಇದರಿಂದ ರಸ್ತೆ ಗುಣಮಟ್ಟ ಕಾಯ್ದುಕೊಳ್ಳಲು ಆಗುವುದಿಲ್ಲ. ಮೊದಲು ರಸ್ತೆ ಬದಿಯಲ್ಲಿ ಮಳೆ ಮತ್ತು ಚರಂಡಿ ನೀರು ಹರಿಯಲು ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದರು. ಮೊದಲು ಮಳೆ ನೀರು ಹರಿಯುವಂತೆ ಮಾಡಿ ಬಳಿಕ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಆಲ್ದೂರಿನಲ್ಲಿ ಶಾಸಕಿ ಸೂಚಿಸಿ ತೆರಳಿದ್ದರು.
ಸರ್ಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವಾಗ ವೈಜ್ಞಾನಿಕವಾಗಿ ಚಿಂತಿಸಿದಾಗ ಮಾತ್ರ ಪ್ರಕೃತಿಯಿಂದ ಎದುರಾಗುವ ಸವಾಲುಗಳನ್ನು ಎದುರಿಸಿ ಕಾಮಗಾರಿ ಮಾಡಬಹುದು. ಈ ವರ್ಷ ಅತಿಯಾದ ಮಳೆ ಇದೆ. ಆದರೆ, ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಸಂಪೂರ್ಣಗೊಂಡಿದೆ. ಕಳೆದ ವರ್ಷವೇ ಸೂಕ್ತ ಕ್ರಮವನ್ನು ರಸ್ತೆ ಅಭಿವೃದ್ಧಿಗೆ ಗಮನಹರಿಸಿದ್ದರೆ ಸಮಸ್ಯೆಯಿಂದ ಪಾರಾಗಬಹುದಿತ್ತು. ರಸ್ತೆಯ ಅಭಿವೃದ್ಧಿಯನ್ನು ಸಮಗ್ರ ರೀತಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾಡುತ್ತದೆ ಎಂಬುದು ಮರೀಚಿಕೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ದೂರಿದರು.
ಸಮಸ್ಯೆ ಪರಿಹರಿಸಲು, ರಸ್ತೆ ದುರಸ್ತಿ ಮತ್ತು ನೂತನ ಕಾಮಗಾರಿಗಳಿಗೆ ಶಾಸಕರು ಸರ್ಕಾರದ ಪರವಾಗಿ ಅನುದಾನ ತಂದು ಪ್ರಾರಂಭಿಸಿದ್ದಾರೆ. ಪ್ರಕೃತಿಯ ಮುಂದೆ ಮನುಷ್ಯನು ಸ್ಪರ್ಧೆ ಒಡ್ಡಲು ಸಾಧ್ಯವಿಲ್ಲ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್ ಹೇಳಿದರು.
ಶೀಘ್ರ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ ತುರ್ತು ಸಂದರ್ಭ ಓಡಾಡಲು ಸಮಸ್ಯೆ ರಸ್ತೆ ಸಮಸ್ಯೆ, ಪ್ರವಾಸಿಗರ ಪರದಾಟ
ದುರಸ್ತಿ ಕಾಮಗಾರಿ ಆರಂಭ ಆಲ್ದೂರು ಭಾಗದ ರಾಜ್ಯ ಹೆದ್ದಾರಿ ಮತ್ತು ಹೆದ್ದಾರಿ ಸಂಪರ್ಕ ರಸ್ತೆಗೆ ಒಂದು ವರ್ಷದ ಹಿಂದೆಯೇ ಅನುದಾನ ನಿಗದಿಪಡಿಸಲಾಗಿತ್ತು. ಅದನ್ನು ಕಾರ್ಯರೂಪಕ್ಕೆ ತರುವಾಗ ಮಳೆ ಅಡ್ಡಿಯಾಗಿದೆ. ಈಗಾಗಲೇ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬಂದಿದ್ದು ಜೋಳದಾಳು ಆಲ್ದೂರು ಆಣೂರು ತೋರಣ ಮಾವು ವಸ್ತಾರೆ ಭಾಗದ ರಸ್ತೆಗಳ ದುರಸ್ತಿ ಕೆಲವೆಡೆ ನೂತನ ರಸ್ತೆ ನಿರ್ಮಾಣ ಪ್ರಾರಂಭವಾಗಿದೆ. ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.