ADVERTISEMENT

ಆಲ್ದೂರು | ನಿಲ್ಲದ ಕಾಡಾನೆ ಹಾವಳಿ: ಕಾರ್ಯಾಚರಣೆಗೆ ತಂಡ ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 6 ಮೇ 2025, 13:25 IST
Last Updated 6 ಮೇ 2025, 13:25 IST
ಕಣತಿ ಆನೆ ಬಿಡಾರದಲ್ಲಿ ಕಾರ್ಯಾಚರಣೆಗೆ ಸನ್ನದ್ಧವಾಗಿರುವ ಸಿಬ್ಬಂದಿ
ಕಣತಿ ಆನೆ ಬಿಡಾರದಲ್ಲಿ ಕಾರ್ಯಾಚರಣೆಗೆ ಸನ್ನದ್ಧವಾಗಿರುವ ಸಿಬ್ಬಂದಿ   

ಆಲ್ದೂರು:  ಸಮೀಪದ ಗುಲ್ಲನ್ ಪೇಟೆ, ಸತ್ತಿಹಳ್ಳಿ, ಕೆಳಗೂರು, ಹಾಂದಿ, ಯಲಗುಡಿಗೆ, ಚಂಡಗೋಡು, ಗುಡ್ಡದೂರು, ಹೊಸಳ್ಳಿ, ಗುಪ್ತಶೆಟ್ಟಿಹಳ್ಳಿ, ಕಠಾರದ ಹಳ್ಳಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರಿದ್ದು, ಬೆಳೆಗಾರರಲ್ಲಿ, ಗ್ರಾಮಸ್ಥರಲ್ಲಿ  ಆತಂಕ ಮೂಡಿಸಿದೆ.

‘ಕಾಡಾನೆ ಹಿಂಡು ಚಂಡಗೋಡು ಮತ್ತು ಬೆಳಗೋಡು ಗ್ರಾಮದ ಬಳಿ ಬೀಡು ಬಿಟ್ಟಿದ್ದು, ಬೀಟಮ್ಮ ಭುವನೇಶ್ವರಿ ಗುಂಪುಗಳಿಂದ ಹೊರಬಂದಿರುವ  18 ರಿಂದ 20 ಆನೆಗಳು ಈಗ ಒಂದೇ ತಂಡವಾಗಿ ಸಂಚರಿಸುತ್ತಿವೆ. ಇದರಲ್ಲಿ 12 ದೊಡ್ಡ ಆನೆಗಳು, ಐದು ಮರಿ ಆನೆಗಳಿವೆ. ರೇಡಿಯೊ ಕಾಲರ್‌ ಅಳವಡಿಸದ ಕಾರಣ ಆನೆಗಳ ಚಲನವಲನದ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಲಯ ಅರಣ್ಯ ಅಧಿಕಾರಿ ಹರೀಶ್ ಹೇಳಿದರು. 

ಈ ಆನೆ ಹಿಂಡನ್ನು ವಾಪಸ್‌ ಕಾಡಿಗಟ್ಟಲು ನಾಗರಹೊಳೆ, ದುಬಾರೆ, ಮತ್ತಿಗೋಡು ಆನೆ ಬಿಡಾರದಿಂದ ಏಕಲವ್ಯ, ಭೀಮ, ಸುಗ್ರೀವ, ಮಹೇಂದ್ರ, ಎಂಬ ನಾಲ್ಕು ಆನೆಗಳನ್ನು ಕರೆಯಿಸಿಕೊಳ್ಳಲಾಗಿದ್ದು, ಕಣತಿ ಭಾಗದಲ್ಲಿ ಶಿಬಿರದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿಟ್ಟುಕೊಳ್ಳಲಾಗಿದೆ.  ಆನೆಗಳನ್ನು ಸಮೀಪದ  ಭದ್ರಾ ಹುಲಿ ಅಭಯಾರಣ್ಯಕ್ಕೆ ಓಡಿಸಲು ಚಿಂತಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಉಪವಲಯ ಅರಣ್ಯ ಅಧಿಕಾರಿ ಸಂದೀಪ್, ಚಿದಾನಂದ್, ರಶ್ಮಿ, ಅರಣ್ಯ ರಕ್ಷಕ ಸಿಬ್ಬಂದಿ ಕಿಶೋರ್, ಅಂತೋಣಿ, ಗಜ ಕ್ರಿಯಾಪಡೆ ಸಿಬ್ಬಂದಿ ತಂಡದಲ್ಲಿದ್ದಾರೆ.  ಕಾಡಾನೆಗಳ ಗುಂಪು ಸಾಕಷ್ಟು ಕಡೆ ಕಾಫಿ ತೋಟ ಮತ್ತು ಬೆಳೆಗಳಿಗೆ ಹಾನಿ ಮಾಡಿದ್ದು ಸಂಬಂಧ ಪಟ್ಟ ರೈತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಆನೆಗಳ ಹಿಂಡು ಸಂಚರಿಸುತ್ತಿರುವ ಗ್ರಾಮಗಳಲ್ಲಿ ತೋಟಗಳ ಮಾಲೀಕರಿಗೆ, ಕಾರ್ಮಿಕರಿಗೆ, ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ಕಳುಹಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.