ಚಿಕ್ಕಮಗಳೂರು: ‘ರಾಜ್ಯ ಸರ್ಕಾರ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು ಮತ್ತು ಅನುಯಾಯಿಗಳು ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂದು ಬರೆಸಿ’ ಎಂದು ಅಂಬೇಡ್ಕರ್ ವಿಚಾರ ವೇದಿಕೆ ಗೌರವಾಧ್ಯಕ್ಷ ಪುಟ್ಟಸ್ವಾಮಿ ಮನವಿ ಮಾಡಿದರು.
2,600 ವರ್ಷಗಳ ಇತಿಹಾಸ ಇರುವ ಭಾರತದ ನೆಲದಲ್ಲಿ ಜನಿಸಿದ ಗೌತಮ ಬುದ್ಧರು ವಿಶ್ವಕ್ಕೆ ಕರುಣೆ, ಪ್ರೀತಿ, ಮೈತ್ರಿ ಬೋಧಿಸಿದ್ದಾರೆ. ಪಂಚಶೀಲ ಮತ್ತು ಅಷ್ಟಾಂಗ ಮಾರ್ಗದ ಮೂಲಕ ಮನುಷ್ಯರನ್ನು ತಿದ್ದಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ರೂಢಿಸಿಕೊಳ್ಳಲು ಪ್ರೇರೇಪಿಸಿದರು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಭಾರತದಲ್ಲಿ ಜನಿಸಿದ ಬೌದ್ಧ ಧಮ್ಮ ಇಂದು ಪ್ರಪಂಚದ ಹಲವು ರಾಷ್ಟ್ರಗಳ ಧರ್ಮವಾಗಿದೆ. ಮಾನವ ಜೀವನಕ್ಕೆ ಬೇಕಾದ ಸರಳ ಮಾರ್ಗಗಳು ಬೌದ್ಧ ಧರ್ಮದಲ್ಲಿವೆ. ಅಂಬೇಡ್ಕರ್ ಅವರು 20 ವರ್ಷಗಳ ಕಾಲ ವಿಶ್ವದ ಹಲವು ಧರ್ಮಗಳನ್ನು ಅಧ್ಯಯನ ಮಾಡಿದರು. ನಮ್ಮ ಪೂರ್ವಿಕರು ಅನುಸರಿಸಿದ ಭಾರತದ ನೆಲಮೂಲದ ಧರ್ಮವಾದ ಬೌದ್ಧ ಧರ್ಮಕ್ಕೆ ಮರಳಿ ಇತಿಹಾಸ ಸೃಷ್ಟಿಸಿದರು’ ಎಂದರು.
ಪರಿಶಿಷ್ಟ ಜಾತಿಯವರು ಬೌದ್ಧ ಎಂದು ಬರೆಸಿದಲ್ಲಿ 1990ರ ಕೇಂದ್ರ ಸರ್ಕಾರದ ಆದೇಶದಂತೆ ಮೀಸಲಾತಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ವಿಚಾರವನ್ನು ಸಂಘಟನೆ ಪ್ರಮುಖರು, ಅಂಬೇಡ್ಕರ್‌ವಾದಿಗಳು, ಬುದ್ಧರ ಅನುಯಾಯಿಗಳು ಆಂದೋಲನದ ರೀತಿಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಸಮೀಕ್ಷೆ ಕಾಲಂ 8ರಲ್ಲಿ 6ನೇ ಕ್ರಮ ಸಂಖ್ಯೆ 'ಬೌದ್ಧ' ಎಂದು ತಪ್ಪದೇ ಬರೆಸಲು ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ವೇದಿಕೆಯ ನಿರ್ದೇಶಕ ರವಿ, ಅಂಬೇಡ್ಕರ್ ಸಹಕಾರ ಸಂಘದ ಉಪಾಧ್ಯಕ್ಷ ಸುರೇಶ್, ಬಿ.ಸಿ.ಕುಮಾರ್, ಜಗದೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.