ಕಡೂರು: ‘ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಅಭಿವೃದ್ಧಿಗೆ ಯುವಜನ ಕ್ರೀಡಾ ಇಲಾಖೆಯ ವತಿಯಿಂದ ₹3.50 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲ್ಲೂಕು ಪಂಚಾಯಿತಿಯ ಆಶ್ರಯದಲ್ಲಿ ಮಂಗಳವಾರ ನಡೆದ ಕಡೂರು ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈ ಅನುದಾನದಲ್ಲಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಗ್ಯಾಲರಿ ಹಾಗೂ ವಾಲಿಬಾಲ್, ಥ್ರೋಬಾಲ್ ಅಂಕಣಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಇದು ಜಿಲ್ಲೆಯಲ್ಲಿಯೇ ಉತ್ತಮ ಕ್ರೀಡಾಂಗಣವಾಗಿ ಹೊರಹೊಮ್ಮಲಿದೆ ಎಂದರು.
ದಸರಾ ಮಹೋತ್ಸವ ಈ ನಾಡಿನ ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿದೆ. ಅದರಂಗವಾಗಿ ಮಹಾರಾಜರ ಕಾಲದಿಂದಲೂ ಗ್ರಾಮೀಣ ಭಾಗಗಳಲ್ಲಿನ ಕ್ರೀಡೆಗಳನ್ನು ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟ ನಡೆಸಲಾಗುತ್ತಿದೆ. ಗ್ರಾಮೀಣ ಭಾಗಗಳ ಯುವಕರು, ಯುವತಿಯರು ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕ್ರೀಡಾಪಟುಗಳು ಉತ್ತಮವಾದ ಪ್ರದರ್ಶನ ನೀಡಿ ಎಂದು ಅವರು ಹಾರೈಸಿದರು.
ದಸರಾ ಕ್ರೀಡಾಕೂಟ ಉದ್ಘಾಟಿಸಿದ ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ‘ಸದೃಢ ದೇಹ, ಉತ್ತಮ ಆರೋಗ್ಯಕ್ಕೆ ಆಟೋಟಗಳು ಸಹಕಾರಿಯಾಗಿವೆ. ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಗೆಲ್ಲಲು ಸಾಧ್ಯವಿಲ್ಲ. ಗೆಲುವಿಗಿಂತ ಸ್ಪರ್ಧಾ ಮನೋಭಾವ ಹಾಗೂ ಭಾಗವಹಿಸುವಿಕೆ ಮುಖ್ಯ. ಕ್ರೀಡಾಳುಗಳ ಕೌಶಲ ಮುಂದಿನ ಜೀವನಕ್ಕೆ ದಾರಿಯಾಗಲಿ. ದಸರಾ ಮಹೋತ್ಸವ ಇಡೀ ವಿಶ್ವದಲ್ಲೇ ಪ್ರಖ್ಯಾತವಾಗಿದ್ದು, ಕ್ರೀಡೆಗಳಿಗೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹ ನಿರಂತರವಾಗಿರಲಿ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಎಂ.ಎಚ್., ಬಿಆರ್‌ಸಿ ಪ್ರೇಮ್‌ಕುಮಾರ್, ನಾಗರಾಜಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಮಂಜುನಾಥ್, ಶಿಕ್ಷಕರ ಸಂಘದ ಕೆ.ಎಂ.ಹರೀಶ್, ಜಯದೇವಪ್ಪ, ಕ್ರೀಡಾಧಿಕಾರಿ ಎಚ್.ಎಲ್.ಮುರಳೀಧರ, ಲತಾಮಣಿ, ಕೆ.ಡಿ. ನಾಗರಾಜ್, ರಾಜೇಶ್ವರಿ, ಧನಪಾಲ ನಾಯಕ್, ಬೆಂಕಿಶೇಖರಪ್ಪ, ಆಂಜನೇಯ ಇದ್ದರು.
ಪುರುಷರ ವಿಭಾಗದಲ್ಲಿ ಕಬಡ್ಡಿ- ಹೊಯ್ಸಳ ತಂಡ ಕಡೂರು, ವಾಲಿಬಾಲ್- ಕಡೂರು ಅಸೋಸಿಯೇಷನ್, ಥ್ರೋಬಾಲ್-ಉಡುಗೆರೆ ತಂಡ, ಕೊಕ್ಕೊ-ಹೊಯ್ಸಳ ತಂಡ ಕಡೂರು, ಬಾಲ್ ಬ್ಯಾಡ್ಮಿಂಟನ್-ಸಿಂಗಟಗೆರೆ ತಂಡಗಳು ಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿವೆ.
ಮಹಿಳೆಯರ ವಿಭಾಗದಲ್ಲಿ ಕಬಡ್ಡಿ-ಕಡೂರು ತಂಡ, ಕೊಕ್ಕೊ-ಚಕ್ರವರ್ತಿ ಪಿಯು ಕಾಲೇಜು, ವಾಲಿಬಾಲ್-ಬಿಜಿಎಸ್ ಬಾಲಕಿಯರ ತಂಡ, ಥ್ರೋಬಾಲ್-ಬಾಣೂರು ತಂಡ, ಬಾಲ್ ಬ್ಯಾಡ್ಮಿಂಟನ್-ಕಡೂರು ಕುವೆಂಪು ತಂಡಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿವೆ ಎಂದು ಸಹಾಯಕ ಕ್ರೀಡಾಧಿಕಾರಿ ಮುರಳೀಧರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.