ADVERTISEMENT

ನರಸಿಂಹರಾಜಪುರ | ಅಮೃತ್ 2.0 ಯೋಜನೆ: ₹17.50 ಕೋಟಿ ಬಿಡುಗಡೆ

ತುಂಗಾ ನದಿಯಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ

ಕೆ.ವಿ.ನಾಗರಾಜ್
Published 15 ಡಿಸೆಂಬರ್ 2025, 5:21 IST
Last Updated 15 ಡಿಸೆಂಬರ್ 2025, 5:21 IST
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯ ಒಂದು ನೋಟ
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯ ಒಂದು ನೋಟ   

ನರಸಿಂಹರಾಜಪುರ: ಪಟ್ಟಣಕ್ಕೆ ತಾಲ್ಲೂಕಿನ ಮುತ್ತಿನಕೊಪ್ಪದ ವ್ಯಾಪ್ತಿಯಲ್ಲಿರುವ ತುಂಗಾ ನದಿಯಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈ‌ಸಲು ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ₹17.50 ಕೋಟಿ ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಾಗಿರುವ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 50ರಷ್ಟು, ರಾಜ್ಯ ಸರ್ಕಾರ ಶೇ 40 ಹಾಗೂ ಸಂಬಂಧಿಸಿದ ಪಟ್ಟಣ ಪಂಚಾಯಿತಿ ಶೇ 10ರಷ್ಟು ಅನುದಾನ ನೀಡಲಿದೆ. ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಕೈಗೊಳ್ಳ ಬೇಕಾದ ಜಲಮೂಲಗಳ ಪುನಃಶ್ಚೇತನ, ಹಸಿರು ಜಾಗ, ಉದ್ಯಾನಗಳ ಅಭಿವೃದ್ಧಿಗೆ ಸಂಬಂಧಿಸಿ 2024ರ ನ.13ರಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಬಾನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ‌ಕಾಮಗಾರಿ ಕೈಗೊಳ್ಳುತ್ತಿದೆ. 2055ರ ಪಟ್ಟಣದ ಜನಸಂಖ್ಯೆಯನ್ನು ಆಧರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ. 2011ರ ಜನಗಣತಿ ಪ್ರಕಾರ ಪಟ್ಟಣದ ವ್ಯಾಪ್ತಿಯಲ್ಲಿ 7,458 ಜನಸಂಖ್ಯೆ ಇದೆ.

ಈ ಯೋಜನೆಯಡಿ ಮುತ್ತಿನಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಗೆ ದೋಣಿಗಂಡಿ ಬಳಿ ಜಾಕ್ ವೆಲ್ ನಿರ್ಮಿಸಿ ನೀರು ಶುದ್ಧೀಕರಿಸಿ 28 ಕಿ.ಮೀ ಕೊಳವೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಪಟ್ಟಣದ ವ್ಯಾಪ್ತಿಯಲ್ಲಿ 2.50 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತದೆ. ಪ್ರತಿದಿನ 2ದಶಲಕ್ಷ ಲೀಟರ್ (2ಎಂಎಲ್‌ಡಿ) ನೀರು ಸರಬರಾಜು ಮಾಡಲಾಗುತ್ತದೆ. ಪಟ್ಟಣದ ವ್ಯಾಪ್ತಿಯ 11 ವಾರ್ಡ್ ನಿವಾಸಿಗಳಿಗೆ ನೀರು ಪೂರೈಕೆಗೆ 27 ಕಿ.ಮೀ ಕೊಳವೆ ಅಳವಡಿಸುವ ಕಾಮಗಾರಿ ಸಾಗಿದೆ. ಪಟ್ಟಣದ ವ್ಯಾಪ‍್ತಿಯ 1,400 ಮನೆಗಳಿಗೆ ನೀರು ಪೋಲಾಗುವುದನ್ನು ತಡೆಯಲು ಮೀಟರ್ ಅಳವಡಿಸಿ ಈಗ ತಿಂಗಳಿಗೆ ನಿಗದಿ ಮಾಡಿರುವ ₹110ರ ದರದಲ್ಲಿ ವ್ಯಕ್ತಿಗೆ ಪ್ರತಿದಿನ 135 ಲೀಟರ್ (ಒಂದು ಕುಟುಂಬದಲ್ಲಿ ಅಂದಾಜು 4 ಜನರಂತೆ) ನೀರು ಪೂರೈಸಲಾಗುತ್ತದೆ. ಯೋಜನೆ ಪೂರ್ಣಗೊಂಡ ಒಂದು ವರ್ಷದವರೆಗೆ ಮಂಡಳಿಯೇ ನಿರ್ವಹಣೆ ಮಾಡುತ್ತದೆ. ನಂತರ ಪಟ್ಟಣ ಪಂಚಾಯಿತಿಯವರೇ ನಿರ್ವಹಣೆ ಮಾಡಬಹುದು. ಮಂಡಳಿ ನಿರ್ವಹಣೆ ಮಾಡುವುದಾದರೆ ಪ್ರತಿ ವರ್ಷ ನಿಗದಿತ ಮೊತ್ತದ ಹಣವನ್ನು ಪಟ್ಟಣ ಪಂಚಾಯಿತಿಯಿಂದ ಮಂಡಳಿಗೆ ಪಾವತಿಸಬೇಕಾಗುತ್ತದೆ ಎಂದು ಎಂಜಿನಿಯರ್ ತಿಳಿಸಿದರು.

ADVERTISEMENT

ಕ್ಷೇತ್ರದ ಮೂರು ತಾಲ್ಲೂಕಿನ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಅನುದಾನ ಬಿಡುಗಡೆಯಾಗಿದೆ. ನರಸಿಂಹರಾಜಪುರ ಪಟ್ಟಣಕ್ಕೆ ₹17.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಮೊದಲು ಭದ್ರಾ ನದಿಯಿಂದ ನೀರು ಸರಬರಾಜು ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಭದ್ರಾಹಿನ್ನೀರಿನಲ್ಲಿ ಜಾಕ್ ವೆಲ್ ನಿರ್ಮಿಸಲು ಸಮಸ್ಯೆಯಾಗುತ್ತದೆ. ಹಿನ್ನೀರು ಬೇಸಿಗೆ ಸಂದರ್ಭದಲ್ಲಿ ಕಡಿಮೆಯಾಗುತ್ತದೆ. ಕೊಳವೆ ಅಳವಡಿಕೆಗೆ ಅರಣ್ಯ ಇಲಾಖೆ ಒಪ್ಪಿಗೆ ಬೇಕಾಗುವುದರಿಂದ ಇದನ್ನು ಕೈಬಿಟ್ಟು ವರ್ಷಪೂರ್ತಿ ನೀರು ಲಭ್ಯವಾಗುವ ತುಂಗಾನದಿಯಿಂದ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಇದರ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಭದ್ರಾ ನದಿಯಲ್ಲಿ ವರ್ಷದ 365 ದಿನ ನೀರು ಲಭ್ಯವಾಗುವುದಿಲ್ಲ. ಹಾಗಾಗಿ ತಾಂತ್ರಿಕ ಅಭಿಪ್ರಾಯದ ಪ್ರಕಾರ ನೀರು ಯಾವಾಗಲೂ ಲಭ್ಯವಾಗುವ ತುಂಗಾ ನದಿಯ ಮೂಲದಿಂದ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ ಎಂದು ಜೆಇ ಮಾರುತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನರಸಿಂಹರಾಜಪುರಕ್ಕೆ ಮುತ್ತಿನಕೊಪ್ಪದ ತುಂಗಾನದಿಯಿಂದ ನೀರು ಪೂರೈಕೆಗೆ ಅಳವಡಿಸಲು ಇಟ್ಟಿರುವ ಕೊಳವೆಗಳು
ಟಿ.ಡಿ.ರಾಜೇಗೌಡ

2055ರ ಪಟ್ಟಣದ ಜನಸಂಖ್ಯೆ ಆಧರಿಸಿ ಯೋಜನೆ ಜಾರಿ ಪ್ರಸ್ತುತ 39 ಕೊಳವೆ ಬಾವಿಯಿಂದ ಪಟ್ಟಣದಲ್ಲಿ ನೀರು ಪೂರೈಕೆ ಸದಾ ನೀರು ಲಭ್ಯವಾಗುವ ತುಂಗಾನದಿಯಿಂದ ಕೊಳವೆ ಮೂಲಕ ನೀರು ಪೂರೈಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.