ADVERTISEMENT

ಅನುಸೂಯಾ ಜಯಂತಿ ಇಂದು

ದತ್ತ ಜಯಂತ್ಯುತ್ಸವಕ್ಕೆ ಸಿದ್ಧತೆ: ಮಹಿಳಾ ಭಕ್ತರಿಂದ ಸಂಕೀರ್ತನಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 16:41 IST
Last Updated 26 ಡಿಸೆಂಬರ್ 2020, 16:41 IST
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಕೇಸರಿ ಹಾರ ಕಟ್ಟಿ ಅಲಂಕರಿಸಲಾಗಿದೆ. –ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಕೇಸರಿ ಹಾರ ಕಟ್ಟಿ ಅಲಂಕರಿಸಲಾಗಿದೆ. –ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ದತ್ತ ಜಯಂತ್ಯುತ್ಸವ ಇದೇ 27ರಿಂದ 29ರವರೆಗೆ ನಡೆಯಲಿದೆ. ನಗರ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ಬಾವುಟಗಳನ್ನು ಕಟ್ಟಿ ಅಲಂಕರಿಸಲಾಗಿದೆ. ಭಾನುವಾರ ಅನಸೂಯಾ ದೇವಿ ಜಯಂತಿ, ಸಂಕೀರ್ತನಾ ಯಾತ್ರೆ ಜರುಗಲಿದೆ.
ಭಾನುವಾರ ಬೆಳಿಗ್ಗೆ 8.30ಕ್ಕೆ ಬೋಳ ರಾಮೇಶ್ವರ ದೇಗುಲದ ಆವರಣದಿಂದ ಸಂಕೀರ್ತನಾ ಯಾತ್ರೆ ಹೊರಡಲಿದೆ. ಆರ್‌.ಜಿ.ರಸ್ತೆಯ ಕಾಮಧೇನು ಗಣಪತಿ ದೇಗುಲ ತಲುಪಲಿದೆ.

‘ನಟಿ ತಾರಾ, ವಿವಿಧ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಮಹಿಳೆ ಯರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವರು’ ಎಂದು ಬಜರಂಗ ದಳ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ನಂತರ ಭಕ್ತೆಯರು ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾಕ್ಕೆ ತೆರಳುವರು. ಗುಹೆಯಲ್ಲಿ ದತ್ತ ಪಾದುಕೆ ದರ್ಶನ ಮಾಡುವರು. ಗಿರಿಯಲ್ಲಿ ಅನಸೂಯಾ ದೇವಿ ಪೂಜೆ, ಹೋಮ ಕೈಂಕರ್ಯ ನೆರವೇರಿಸುವರು.

ADVERTISEMENT

28ರಂದು ಸಂಕೀರ್ತನಾ ಯಾತ್ರೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಕಾಮಧೇನು ಗಣಪತಿ ದೇಗುಲದ ಬಳಿಯಿಂದ ಯಾತ್ರೆ ಆರಂಭವಾಗಲಿದೆ. ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ ರಸ್ತೆ ಮಾರ್ಗವಾಗಿ ಆಜಾದ್‌ ಪಾರ್ಕ್‌ ವೃತ್ತ ತಲುಪಲಿದೆ. ವೃತ್ತದಲ್ಲಿ ಪೂಜಾ ಕೈಂಕರ್ಯ ನೆರವೇರಲಿದೆ.

29ರಂದು ದತ್ತಮಾಲಾಧಾರಿಗಳು, ದತ್ತ ಭಕ್ತರು ಗಿರಿಗೆ ತೆರಳುವರು. ಗುಹೆಯೊಳಗೆ ದತ್ತಪಾದುಕೆ ದರ್ಶನ ಪಡೆಯುವರು. ಗಿರಿಯಲ್ಲಿ ಧನ್ವಂತರಿ ಹೋಮ, ಪೂಜೆ ನೆರವೇರಲಿದೆ.

30ರವರೆಗೆ ಪ್ರವಾಸಿಗರಿಗೆ ನಿರ್ಬಂಧ

ತಾಲ್ಲೂಕಿನ ಗಿರಿ ಶ್ರೇಣಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಇದೇ 30ರಂದು ಸಂಜೆ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ಮಾಣಿಕ್ಯ ಧಾರಾ, ಹೊನ್ಮಮ್ಮನ ಹಳ್ಳ, ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದ ಭಾಗದ ತಾಣಗಳ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಜಿಲ್ಲೆಯ ಇತರ ಪ್ರವಾಸಿ ತಾಣ ಗಳಿಗೆ ಭೇಟಿ ನೀಡಲು ಯಾವುದೇ ನಿರ್ಬಂಧ ಇರುವುದಿಲ್ಲ. ಹೋಟೆಲ್‌, ಹೋಂ ಸ್ಟೇ, ರೆಸಾ ರ್ಟ್‌ಗಳಲ್ಲಿ ವಾಸ್ತವ್ಯ (ಬುಕ್ಕಿಂಗ್ ಮಾಡಿರುವವರು) ಹೂಡಲು ಯಾವುದೇ ನಿರ್ಬಂಧ ಇಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.