
ಶೃಂಗೇರಿ: ‘ಮಲೆನಾಡಿನ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಪ್ರತಿ ನಿಮಿಷ ಭಯದಿಂದ ಬದುಕು ಸಾಗಿಸುವ ಹಂತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿಟ್ಟಿವೆ. ಸರ್ಕಾರಗಳಿಗೆ ಪರಿಸರವಾದಿಗಳು ಭಯಪಡಿಸಿರುವ ಕಾರಣಕ್ಕೆ ಹುಟ್ಟಿ ಬಾಳಿ ಬದುಕಿದ ಊರನ್ನು ಬಹಳ ನೋವಿನಿಂದ ತೊರೆಯಲು ಸಿದ್ದರಾಗಿ 15 ವರ್ಷಗಳಾದರೂ ಸರಿಯಾದ ಪರಿಹಾರ ನೀಡಲು ಸರ್ಕಾರಗಳಿಂದ ಸಾಧ್ಯವಾಗಲಿಲ್ಲ’ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
`ರಾಷ್ಟ್ರೀಯ ಉದ್ಯಾನವನದ ಒಳಗೆ ಜನರನ್ನು ಒಕ್ಕಲು ಎಬ್ಬಿಸುವುದು ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶ. ಅವರಿಗೆ ಇಲ್ಲಿರುವುದಕ್ಕಿಂತ ಉತ್ತಮ ಬದುಕು ಕಲ್ಪಿಸಿಕೊಡಬೇಕು ಎಂಬುದು ಯಾವ ಜನಪ್ರತಿನಿಧಿಗಳ ಹೃದಯಕ್ಕೂ ನಾಟಿಲ್ಲ. ನಮ್ಮ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಕೇಂದ್ರದ ಪರಿಸರ ಸಚಿವರೊಂದಿಗೆ ಚರ್ಚಿಸಿ ಇಲ್ಲಿನ ಪುನರ್ವಸತಿಯ ಸಮಸ್ಯೆಯನ್ನು ಬಗೆಹರಿಸಿದ್ದರೆ ಜನರು ಬೇರೆ ಕಡೆ ಹೋಗಿ ಬದುಕುತ್ತಿದ್ದರು. ಇಂದು ಇಲ್ಲಿ ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡರ ಸಾವು ಸಂಭವಿಸುತ್ತಿರಲಿಲ್ಲ. ಜವಾಬ್ದಾರಿ ಇರುವ ಸಂಸದರು ಬಂದು ಮೃತರ ಕುಟುಂಬದವರಿಗೆ ಇಂದಿಗೂ ಸಾಂತ್ವನ ಹೇಳಲಿಲ್ಲ. ಇನ್ನೇನು ಅವರು ವೈಕುಂಠ ಸಮಾರಾಧನೆ ಊಟಕ್ಕೆ ಬರ್ತಾರಾ? ಎಂದು ಪ್ರಶ್ನಿಸಿದರು.
ಮಲೆನಾಡಿನಲ್ಲಿ ಆನೆಗಳ ತುಳಿತಕ್ಕೆ ಏಳು ಜನ ಮೃತಪಟ್ಟು, ಕಾಡುಕೋಣ ದಾಳಿಯಿಂದ 3 ಸಾವು ಸಂಭವಿಸಿದೆ. ಎಲ್ಲಾ ಕಡೆ ಪ್ರತಿಭಟನೆಗಳು ನಡೆದಿದೆ. ಈ ಸಮಯದಲ್ಲಿ ಪಕ್ಷಭೇದ ಮರೆತು ಜಿಲ್ಲಾ ಉಸ್ತುವಾರಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆದರೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಮಾತ್ರ ಯಾರ ಮನೆಗಳಿಗೆ ತೆರಳಿ ಸಾಂತ್ವನ ಹೇಳಲಿಲ್ಲ. ಇಲ್ಲಿಯ ಜನ ಇದಕ್ಕೆನಾ ನಿಮ್ಮನ್ನು ಲೋಕಸಭೆಗೆ ಕಳಿಸಿರುವುದು. ಮಲೆನಾಡಿನ ಸಮಸ್ಯೆಗಳಿಗೆ ರಾಜ್ಯ ಸರ್ಕಾರದ ಜವಾಬ್ದಾರಿ ಎಷ್ಟೀದೆಯೋ, ಅಷ್ಟೇ ಕೇಂದ್ರ ಸರ್ಕಾರದ ಜವಾಬ್ದಾರಿಯು ಇದೆ ಎನ್ನುವುದನ್ನು ಮರೆಯಬೇಡಿ' ಎಂದು ತಿಳಿಸಿದ್ದಾರೆ.