ಆಲ್ದೂರು: ಸಮೀಪದ ಆವತಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನದ ಕೊರತೆ ಎದುರಾಗಿದ್ದು, ಪಂಚಾಯಿತಿಯ ಹಳೆಯ ಶಿಥಿಲ ಕಟ್ಟಡ ಕುಸಿಯುವ ಮುನ್ನವೇ ನೂತನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.
ಆವತಿ ಪಂಚಾಯಿತಿಯು ನಾಲ್ಕು ಕಂದಾಯ ಗ್ರಾಮ, 14 ಉಪ ಗ್ರಾಮಗಳನ್ನು ಒಳಗೊಂಡಿದ್ದು ಏಳು ಮಂದಿ ಸದಸ್ಯರಿದ್ದಾರೆ. 2600ಕ್ಕೂ ಹೆಚ್ಚು ಜನಸಂಖ್ಯೆ ಇದೆ. 65 ವರ್ಷಗಳ ಹಿಂದೆ ನಿರ್ಮಾಣಗೊಂಡ ಸಮೀಪದ ಆವತಿ ಗ್ರಾಮ ಪಂಚಾಯಿತಿ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.
ಸರ್ವೆ ನಂಬರ್ 192ರಲ್ಲಿ ಇರುವ ಹಳೆಯ ಕಟ್ಟಡವು ಸರ್ಕಾರದಿಂದ ನಿರ್ಮಿತವಾಗಿದ್ದರೂ ಜಾಗವು ಚರಣ್ ಮತ್ತು ಇತರರಿಗೆ ಸೇರಿದ್ದಾಗಿದೆ. ಹಳೆ ಕಟ್ಟಡವನ್ನು ನವೀಕರಿಸಲು ಮಾಲೀಕರು ನಿರಾಕರಿಸಿದ್ದರಿಂದ ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ. ಗ್ರಾಮ ಪಂಚಾಯಿತಿಗೆ 1967-68ರಲ್ಲಿ ಜಾಗ ಮಂಜೂರಾಗಿದೆ. ಸರ್ವೇ ನಂಬರ್ 166ರಲ್ಲಿ ಮಂಜೂರಾಗಿರುವ 6.39 ಎಕರೆ ಜಮೀನಿನಲ್ಲಿ ಹೊಸದಾಗಿ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ.
‘ಕಟ್ಟಡ ಕಾಮಗಾರಿಗೆ ಒಟ್ಟು ಅಂದಾಜು ₹60 ಲಕ್ಷ ಅನುದಾನದ ಅವಶ್ಯಕತೆ ಇದ್ದು, ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ರಾಜೀವ್ ಸೇವಾ ಕೇಂದ್ರ ಅಡಿ ₹20 ಲಕ್ಷ 15ನೇ ಹಣಕಾಸು ಯೋಜನೆಯಲ್ಲಿ 5 ಲಕ್ಷ ಮೀಸಲಿಡಲಾಗಿದೆ. ಸದಸ್ಯರನ್ನು ಒಳಗೊಂಡ ತಂಡ ರಚಿಸಿ ಹೆಚ್ಚಿನ ಅನುದಾನಕ್ಕಾಗಿ ಬಿಜೆಪಿ ಹೋಬಳಿ ಅಧ್ಯಕ್ಷರ ಜತೆಗೂಡಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರ ಬಳಿ ಈಚೆಗೆ ಮನವಿ ಮಾಡಲಾಗಿದೆ’ ಎಂದು ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ ಮಲ್ಲೇಶ್ ಹೇಳಿದರು.
‘ಈಗಾಗಲೇ ಭರವಸೆ ನೀಡಿದಂತೆ ₹15 ಲಕ್ಷ ಅನುದಾನದಲ್ಲಿ ₹10 ಲಕ್ಷ ಶಾಸಕಿ ನಯನಾ ಮೋಟಮ್ಮ ಅವರು ಬಿಡುಗಡೆಗೊಳಿಸಿದ್ದಾರೆ. ₹5 ಲಕ್ಷ ಬಾಕಿ ಇದೆ. ಇನ್ನು ₹5 ಲಕ್ಷ ಹೆಚ್ಚುವರಿ ಅನುದಾನ ಒದಗಿಸುವಂತೆ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಮನವಿ ಮಾಡಲಾಗುವುದು’ ಎಂದು ಆವತಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾಂತ್ ತಿಳಿಸಿದರು.
‘ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಮೀಸಲಿಟ್ಟಿರುವ ಹಣಕ್ಕಿಂತ ಹೆಚ್ಚಿನ ಅನುದಾನದ ಬೇಡಿಕೆ ಇದ್ದು, ಈಚೆಗೆ ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರ ಬಳಿ ಮನವಿ ಮಾಡಿದಾಗ ₹5 ಲಕ್ಷ ಅನುದಾನ ನವೆಂಬರ್‌ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ಅನುದಾನ ನೀಡುವಂತೆ ಮನವಿ ಮಾಡಲಾಗುವುದು’ ಎಂದು ಬಿಜೆಪಿ ಆವತಿ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ್ ಕೆರೆಮಕ್ಕಿ ತಿಳಿಸಿದರು.
ಸುಸಜ್ಜಿತ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕಾಗಿ ಅವಶ್ಯವಿರುವ ಹೆಚ್ಚಿನ ಅನುದಾನವನ್ನು ಶಾಸಕಿ ನಯನಾ ಮೋಟಮ್ಮ ಅವರು ಒದಗಿಸಿದ್ದು ಮತ್ತಷ್ಟು ಅನುದಾನಕ್ಕಾಗಿ ಪಂಚಾಯಿತಿ ಎಲ್ಲ ಸದಸ್ಯರ ಮೂಲಕ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗುವುದುಬಿ.ಎಂ.ಪವಿತ್ರ ರಾಜಿತ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಹಳೆಯ ಪಂಚಾಯಿತಿ ಕಟ್ಟಡದಲ್ಲಿ ಕೊಠಡಿಗಳ ಸಂಖ್ಯೆ ಮತ್ತು ಒಂದೇ ಶೌಚಾಲಯ ಸೇರಿ ಸೌಲಭ್ಯದ ಕೊರತೆ ಇದೆ. ಮುಕ್ತವಾಗಿ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಕೂಡ ಇಲ್ಲದೆ ಪರಿತಪಿಸುವಂತಾಗಿದೆಜಯಮ್ಮ ಮಲ್ಲೇಶ್ ,ಪಂಚಾಯಿತಿ ಉಪಾಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.