ಚಿಕ್ಕಮಗಳೂರು: ಆಯುಧ ಪೂಜೆ ಅಂಗವಾಗಿ ಮಂಗಳವಾರ ನಗರದೆಲ್ಲೆಡೆ ವ್ಯಾಪಾರ– ವಹಿವಾಟು ಭರ್ಜರಿಯಾಗಿ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಇತ್ತು. ಪೂಜೆಗೆ ಬೇಕಾದ ಕುಂಬಳ ಕಾಯಿ, ಬಾಳೆ ಕಂದು, ಹೂವು ಮತ್ತು ಹಣ್ಣು ಖರೀದಿಸಲು ಜನರು ಮುಗಿಬಿದ್ದಿದ್ದರು.
ನಗರದ ಮಾರ್ಕೆಟ್ ರಸ್ತೆ, ದೀಪಾ ನರ್ಸಿಂಗ್ ಹೋಂ ರಸ್ತೆ, ಬೈಪಾಸ್ ರಸ್ತೆ, ಆಜಾದ್ ಪಾರ್ಕ್ ವೃತ್ತ, ವಿಜಯಪುರ, ಬೈಪಾಸ್, ಎಐಟಿ ವೃತ್ತ, ಕಲ್ಯಾಣನಗರ, ಬೇಲೂರು ರಸ್ತೆ, ನಲ್ಲೂರುಗೇಟ್, ತೊಗರಿಹಂಕಲ್ ವೃತ್ತ, ಹನುಂಮತಪ್ಪ ವೃತ್ತ, ರತ್ನಗಿರಿ ರಸ್ತೆ, ಹೌಸಿಂಗ್ ಬೋರ್ಡ್ ಸೇರಿದಂತೆ ವಿವಿಧೆಡೆ ರಸ್ತೆ ಬದಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಹೂವು–ಹಣ್ಣು, ಬಾಳೆದಿಂಡು, ನಿಂಬೆಹಣ್ಣು, ಕುಂಬಳಕಾಯಿ, ಮಾವಿನ ಎಲೆ, ವಾಹನಗಳ ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿತ್ತು.
ಆಯುಧ ಪೂಜೆ ಕಾರಣಕ್ಕೆ ಹೂವು-ಹಣ್ಣುಗಳ ದರ ಸ್ವಲ್ಪ ಏರಿಕೆಯಾಗಿದೆ. ಸೇವಂತಿಗೆ ಒಂದು ಮಾರಿಗೆ ₹80, ಚಂಡು ಹೂವು ₹60, ಮಲ್ಲಿಗೆ ₹100ಗೆ ಮಾರಾಟವಾದರೆ ಕುಂಬಳ ಕಾಯಿ ಕೆ.ಜಿಗೆ ₹50, ಬಾಳೆದಿಂಡು ಜೋಡಿಗೆ ₹50, ನಿಂಬೆಹಣ್ಣು ₹10ಕ್ಕೆ 3 ಮಾರಾಟ ನಡೆಯಿತು. ಗುಲಾಬಿ, ಸೇವಂತಿಗೆ, ತುಳಸಿ ಬಿಡಿಹೂವಿಗೆ ಬೇಡಿಕೆ ಹೆಚ್ಚಿತ್ತು.
ಸೇಬು ಕೆ.ಜಿಗೆ ₹200, ಬಾಳೆಹಣ್ಣು ಕೆಜಿಗೆ ₹120, ಮೂಸಿಂಬೆ ಹಣ್ಣು ₹100, ದ್ರಾಕ್ಷಿ ₹120, ಸೀತಾಫಲ ₹60, ದಾಳಿಂಬೆ ₹80, ಕಿತ್ತಳೆ ಹಣ್ಣು ₹80 ಇತ್ತು.
ಆಯುಧ ಪೂಜೆಗೆ ಸಿಹಿ ವಿತರಿಸಲು ನಗರದ ಎಂ.ಜಿ. ರಸ್ತೆ, ಕೆ.ಎಂ. ರಸ್ತೆ. ವಿಜಯಪುರ ಸೇರಿ ವಿವಿಧೆಡೆ ಬೇಕರಿ ಹಾಗೂ ಸಿಹಿ ತಿನಿಸುಗಳ ಅಂಗಡಿಗಳಲ್ಲಿ ಖರೀದಿಯಲ್ಲಿ ಜನ ಮುಗಿಬಿದ್ದಿದ್ದರು.
ಕೆಲ ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿಗೆ ಹೊಸ ಬಟ್ಟೆ ನೀಡುವ ಸಂಪ್ರದಾಯವಿದ್ದು, ನಗರದ ಬಟ್ಟೆ ಅಂಗಡಿಗಳಲ್ಲಿ ಹೊಸ ಬಟ್ಟೆ ಖರೀದಿಯಲ್ಲಿ ಜನರು ನಿರತರಾಗಿದ್ದರು.
ಆಯುಧ ಪೂಜೆಗೆ ಎಲ್ಲಾ ಅಂಗಡಿ–ಮುಂಗಟ್ಟುಗಳಲ್ಲಿ ಪೂಜೆಗೆ ಸಿಂಗಾರ ಗೊಂಡಿದ್ದವು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಮಂಗಳವಾರವೇ ಪೂಜೆ ನಡೆದವು.
ಸೋಮವಾರದಿಂದಲೇ ಶುಚಿತ್ವ ನಡೆದಿದ್ದು, ಮಂಗಳವಾರ ಹೂವುಗಳಿಂದ ಸಿಂಗರಿಸಲಾಗಿತ್ತು. ಸಂಜೆ ವೇಳೆಗೆ ಪೂಜೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.