ಚಿಕ್ಕಮಗಳೂರು: ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಅಯ್ಯನಕೆರೆಯಲ್ಲಿ ತೂಬು ಮತ್ತು ಕೆರೆ ದುರಸ್ತಿಗೆ ₹5 ಕೋಟಿ ಒದಗಿಸಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಸಖರಾಯಪಟ್ಟಣ ಸಮೀಪದ ಅಯ್ಯನಕೆರೆಗೆ ಬಾಗಿನ ಅರ್ಪಿಸಿದ ಮಾತನಾಡಿದ ಅವರು, ‘ಮಳೆಗಾಲ ಮುಗಿದ ಕೂಡಲೇ ಏರಿ ಸೌಂದರ್ಯ ಹೆಚ್ಚಿಸಿ ಪ್ರವಾಸಿಗರನ್ನು ಹೆಚ್ಚು ಆಕರ್ಷಣೆ ಮಾಡಲಾಗುವುದು’ ಎಂದರು.
ಸುಮಾರು ಐದು ಸಾವಿರಕ್ಕೂ ಹೆಚ್ಚು ಹೆಕ್ಷ್ಟೇರ್ ಅಚ್ಚುಕಟ್ಟು ಪ್ರದೇಶದ ರೈತರಿದ್ದಾರೆ. ಇಲ್ಲಿ ಬಲ್ಲಾಳೇಶ್ವರ ದೇವಸ್ಥಾನವಿದೆ. ದೇವರ ಅನುಗ್ರಹ ಹಾಗೂ ಅಚ್ಚುಕಟ್ಟುದಾರರ ಸಹಕಾರದೊಂದಿಗೆ ಕೆರೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಮಾತನಾಡಿ, ‘ಪ್ರತಿ ವರ್ಷದಂತೆ ಈ ವರ್ಷವೂ ಬಾಗಿನ ಅರ್ಪಸಲಾಗಿದೆ. ಹಿರಿಯರು ಅಂದು ಸ್ಥಾಪನೆ ಮಾಡಿರುವ ಕೆರೆಗೆ ಪ್ರಕೃತಿಯೇ ಹೆಚ್ಚು ಸಹಾಯ ಮಾಡಿದೆ. ಇಂತಹ ನೈಸರ್ಗಿಕ ಮೂಲ ಹೊಂದಿದ ಕೆರೆ ಇದಾಗಿದೆ. ರೈತರು ಈ ಕೆರೆಯ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದರು.
ಬಸವ ತತ್ವ ಪೀಠದ ಪೀಠಾಧ್ಯಕ್ಷ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ನಿರ್ವಾಣ ಸ್ವಾಮಿಗಳ ಆಶೀರ್ವಾದದಿಂದ ಅಯ್ಯನಕೆರೆ ಕೆರೆ ನಿರ್ಮಾಣವಾಗಿದೆ. ಈ ಕಟ್ಟೆ ಒಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಜೀವ ಪಣಕಿಟ್ಟು ಕೆರೆಯನ್ನು ಉಳಿಸಿದ್ದಾರೆ. ಇದರಿಂದಾಗಿ ಈ ಭಾಗದ ಎಲ್ಲಾ ಜನರ ಜೀವನಾಡಿಯಾಗಿದೆ’ ಎಂದರು.
ಹುಲಿಕೆರೆ ವೀರಪ್ಪಲಿಂಗ ಸ್ವಾಮೀಜಿ, ಕಡೂರಿನ ಜ್ಞಾನಪ್ರಭ ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಶಿವಯೋಗಿ ಶಂಕರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಮಂಗಳಾ ಎಚ್.ಡಿ.ತಮ್ಮಯ್ಯ, ಕಾಂಗ್ರೆಸ್ ಮುಖಂಡರಾದ ಮಹಡಿ ಮನೆ ಸತೀಶ್, ಎಚ್.ಪಿ.ಮಂಜೇಗೌಡ, ಪ್ರವೀಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.