ADVERTISEMENT

ಚಿಕ್ಕಮಗಳೂರು | ಅಚ್ಚುಕಟ್ಟುದಾರರ ಹಕ್ಕು ಅಬಾಧಿತ: ಸಿ.ಟಿ.ರವಿ

ಅಯ್ಯನ ಕೆರೆ: ಸಾಹಸ ಕ್ರೀಡಾ ತರಬೇತಿ ಚಟುವಟಿಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 16:55 IST
Last Updated 8 ಆಗಸ್ಟ್ 2020, 16:55 IST
ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನ ಕೆರೆ ಬಳಿ ಶನಿವಾರ ಏರ್ಪಡಿಸಿದ್ದ ಅಯ್ಯನಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಚಟುವಟಿಕೆಗಳಿಗೆ ಸಚಿವ ರವಿ ಚಾಲನೆ ನೀಡಿದರು. ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಸದಸ್ಯ ಎಸ್‌.ಎಲ್‌.ಭೋಜೇಗೌಡ ಇದ್ದಾರೆ.
ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನ ಕೆರೆ ಬಳಿ ಶನಿವಾರ ಏರ್ಪಡಿಸಿದ್ದ ಅಯ್ಯನಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಚಟುವಟಿಕೆಗಳಿಗೆ ಸಚಿವ ರವಿ ಚಾಲನೆ ನೀಡಿದರು. ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಸದಸ್ಯ ಎಸ್‌.ಎಲ್‌.ಭೋಜೇಗೌಡ ಇದ್ದಾರೆ.   

ಚಿಕ್ಕಮಗಳೂರು: ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಗೆ (ಜೇತನಾ) ಅಯ್ಯನ ಕೆರೆಯಲ್ಲಿ ಸಾಹಸ ಕ್ರೀಡೆ ಚಟುವಟಿಕೆ ತರಬೇತಿ ನೀಡಲು ಅವಕಾಶ ನೀಡಲಾಗಿದೆ, ನೀರಿನ ವಿಚಾರದಲ್ಲಿ ಹಕ್ಕು, ಅಧಿಕಾರ ನೀಡಿಲ್ಲ. ಅಚ್ಚುಕಟ್ಟುದಾರರ ಹಕ್ಕು, ಅಧಿಕಾರ ಕಿತ್ತುಕೊಳ್ಳಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸ್ಪಷ್ಟವಾಗಿ ಹೇಳಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜೇತನಾ, ಜಿಲ್ಲಾಡಳಿತ, ಪ್ರವಾಸೋದ್ಯಮ, ಅರಣ್ಯ ಇಲಾಖೆ, ಜೇತನಾ ಸಹಯೋಗದಲ್ಲಿ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನ ಕೆರೆ ಬಳಿ ಶನಿವಾರ ಏರ್ಪಡಿಸಿದ್ದ ಅಯ್ಯನ ಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಚಟುವಟಿಕೆಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೇತನಾದ ಚಟುವಟಿಕೆ ತರಬೇತಿಗೆ ಮಾತ್ರ ಸೀಮಿತ. ನೀರಿನ ಬಳಕೆ ಹಕ್ಕು, ಅಧಿಕಾರ ಎಲ್ಲವೂ ಅಚ್ಚುಕಟ್ಟುದಾರರ ಸಂಘ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲೇ ಇರುತ್ತದೆ. ಈ ವಿಚಾರದಲ್ಲಿ ಸಂಶಯಬೇಡ ಎಂದು ಹೇಳಿದರು.

ಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಚಟುವಟಿಕೆ, ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಈ ಭಾಗದಲ್ಲಿ ವ್ಯಾಪಾರ ಸುಧಾರಣೆಯಾಗುತ್ತದೆ. ತರಬೇತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಪಡೆದು ಸ್ವ–ಉದ್ಯೋಗ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.

ADVERTISEMENT

ಪರಿಸರಕ್ಕೆ ಧಕ್ಕೆಯಾಗದಂತೆ ಪ್ರವಾಸೋದ್ಯಮ ಉತ್ತೇಜನ ನಿಟ್ಟಿನಲ್ಲಿ ಗಮನ ಹರಿಸಲಾಗುವುದು. ಇಲ್ಲಿ ಸೈಕ್ಲಿಂಗ್‌, ಕಾಯ್ಕಿಂಗ್ ಕೈಗೊಳ್ಳಲಾಗುತ್ತದೆ. ಕೆರೆಯಲ್ಲಿ ಡೀಸೆಲ್‌ ಯಂತ್ರ ಬಳಸಲು ಅವಕಾಶ ನೀಡಿಲ್ಲ ಎಂದರು.

ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ರೈತರ ಪರವಾಗಿ ಕೆಲಸ ಮಾಡುತ್ತೇನೆ. ತರೀಕೆರೆ, ಕಡೂರು, ಚಿಕ್ಕಮಗಳೂರು ಭಾಗದಲ ಕೆರೆಗಳಿಗೆ ನೀರು ತುಂಬಿಸುವ ಗೋಂಧಿ ಯೋಜನೆ ಪ್ರಸ್ತಾವ ಸಂಪುಟದಲ್ಲಿ ಮಂಡಿಸುವ ಹಂತಕ್ಕೆ ತಲುಪಿದೆ. ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ, ಸದಸ್ಯರಾದ ಶಶಿಕಲಾ ಅವಿನಾಶ್‌, ಜಸಂತಾ ಅನಿಲಕುಮಾರ್‌, ರವೀಂದ್ರ ಬೆಳವಾಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭಾ ಸತ್ಯಮೂರ್ತಿ ಇದ್ದರು.

ಅಚ್ಚುಕಟ್ಟುದಾರರ ಆಕ್ಷೇಪ; ವಾಗ್ವಾದ
ಸಾಹಸ ಕ್ರೀಡಾ ತರಬೇತಿ ಚಟುವಟಿಕೆಗೆ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲ ಅಚ್ಚುಕಟ್ಟುದಾರರು ವೇದಿಕೆ ಬಳಿಗೆ ಬಂದು ಸಚಿವರೊಂದಿಗೆ ವಾಗ್ವಾದ ಮಾಡಿದರು.

ಕೆರೆಯಲ್ಲಿ ನೀರು ಕಾಯ್ದಿರಿಸಿದರೆ ರೈತರಿಗೆ ಸಮಸ್ಯೆಯಾಗುತ್ತದೆ. ಕೆರೆಯಲ್ಲಿ ಡೀಸೆಲ್‌ ಎಂಜಿನ್‌ ಬೋಟ್‌ ಇತ್ಯಾದಿ ಬಳಸಿ ನೀರು ಮಲಿನವಾಗುತ್ತದೆ ಎಂದು ಸತೀಶ್‌ ಎಂಬವರು ಅಕ್ಷೇಪ ಎತ್ತಿದರು.

‘ಪ್ರವಾಸೋದ್ಯಮ ಅಭಿವೃದ್ಧಿಗೆ ವಿರೋಧ ಇಲ್ಲ. ಆದರೆ, ಈ ಭಾಗದ ರೈತರಿಗೆ ತೊಂದರೆಯಾಗಬಾರದು. ಈ ಕೆರೆಯಲ್ಲಿ ರೈತರ ಬದುಕಿನ ಪ್ರಶ್ನೆ ಅಡಗಿದೆ. ಮೊದಲು ಬದುಕು, ಪ್ರವಾಸೋದ್ಯಮ ಅಭಿವೃದ್ಧಿ ನಂತರ’ ಎಂದು ಕೆರೆ ಪ್ರದೇಶದ ಅಚ್ಚುಕಟ್ಟುದಾರರೂ ಆಗಿರುವ ವಿಧಾನ ಪರಿಷತ್‌ನ ಸದಸ್ಯ ಎಸ್‌.ಎಲ್‌.ಭೋಜೇಗೌಡ ಹೇಳಿದರು.

ಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಚಟುವಟಿಕೆ ಅವಕಾಶ ನೀಡಿದ್ದ ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಇರಲಿಲ್ಲ. ಅಯ್ಯನ ಕೆರೆ ಈ ಭಾಗದ ಜನರಿಗೆ ಜೀವನಾಡಿ. ಪ್ರವಾಸೋದ್ಯಮ ಅಭಿವೃದ್ಧಿ ನೆವದಲ್ಲಿ ಮೂಲ ಕೆರೆ ಮೂಲ, ಅರಣ್ಯಕ್ಕೆ ಧಕ್ಕೆಯಾಗಬಾರದು’ ಎಂದು ವಿಧಾನ ಪರಿಷತ್‌ನ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ ಹೇಳಿದರು.

‘ಕೆರೆ ಬಳಿ ತೊಟ್ಟಿಗಳನ್ನು ನಿರ್ಮಿಸಿ ಮೀನು ಸಾಕಾಣಿಕೆಗೆ ಈ ಹಿಂದೆ ಅವಕಾಶ ಮಾಡಲಾಗಿತ್ತು. ಕಾರಣಾಂತರಗಳಿಂದ ಮೀನು ಸಾಕಣೆ ಸ್ಥಗಿತವಾಗಿದೆ. ಪುನರಾರಂಭ ನಿಟ್ಟಿನಲ್ಲಿ ಗಮನ ಹರಿಸಬೇಕು’ ಎಂದರು.

‘ಅಯ್ಯನಕೆರೆಯಲ್ಲಿ ವರ್ಷಪೂರ್ತಿ ನೀರು ಇರಲ್ಲ. ಇಲ್ಲಿ ಸರ್ವ ಋತು ಪ್ರವಾಸೋದ್ಯಮ ಕಷ್ಟ. ಹರುಷದ ಕೂಳಿನಾಸೆಗೆ ವರ್ಷದ ಕೂಳಿಗೆ ಕುತ್ತು ಮಾಡಬೇಡಿ‘ ಎಂದು ಅಚ್ಚುಕಟ್ಟುದಾರ ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.