ನರಸಿಂಹರಾಜಪುರ: ನಮೂನೆ 50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳು ತಿರಸ್ಕೃತವಾಗಿದ್ದರೆ ಅದಕ್ಕೆ ಸಕರಾಣವನ್ನು ಅರ್ಜಿದಾರರಿಗೆ ನೀಡಬೇಕು ಎಂದು ಬಗರ್ ಹುಕುಂ ಸಮಿತಿಯ ಅಧ್ಯಕ್ಷ ಈ.ಸಿ.ಜೋಯಿ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ಪ್ರಥಮ ಬಗರ್ ಹುಕುಂ ಸಮಿತಿಯಲ್ಲಿ ಅವರು ಮಾತನಾಡಿದರು.
ಗೋಮಾಳ ಜಾಗವನ್ನು ಗುರುತಿಸುವಾಗ ಕಾಫಿ ಖರಾಬು ಜಾಗವನ್ನು ಬಿಟ್ಟು ಗುರುತಿಸಿದ್ದರೆ, ಒಂದಷ್ಟು ಜನರಿಗಾದರೂ ಹಕ್ಕು ಪತ್ರ ಕೊಡಬಹುದಾಗಿತ್ತು. 23 ಗ್ರಾಮದಲ್ಲಿ ಜಾಗವಿಲ್ಲ ಎಂದು ವರದಿ ನೀಡಿರುವುದರಿಂದಲೂ ಹಲವು ಅರ್ಜಿಗಳು ತಿರಸ್ಕೃತವಾಗಿದೆ ಎಂದರು.
ಕಾಫಿ ಖರಾಬು ಜಾಗದಲ್ಲಿ ಅಡಿಕೆ ಅಥವಾ ಬೇರೆ ಬೆಳೆದಿದ್ದರೆ ಸಾಗುವಳಿ ಚೀಟಿ ಕೊಡಬಹುದಾ ಎಂಬುದರ ಬಗ್ಗೆ ಮುಂದಿನ ಸಭೆಯೊಳಗೆ ಮಾಹಿತಿ ನೀಡಬೇಕು. ನಮೂನೆ 57ರ ಅರ್ಜಿಗಳು ತಿರಸ್ಕೃತವಾದರೆ ಯಾರಿಗೆ ಮೇಲ್ಮನವಿ ಸಲ್ಲಿಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಿ. ಫಾರಂ ನಂ50,53 ಅಡಿ ಅರ್ಜಿ ಸಲ್ಲಿಸುವಾಗ 35 ವರ್ಷಗಳ ಹಿಂದೆ ಪಟ್ಟಣದ ವ್ಯಾಪ್ತಿ ಕಿರಿದಾಗಿತ್ತು. ಪ್ರಸ್ತುತ ಪಟ್ಟಣ ಬೆಳೆದಿರುವುದರಿಂದ ಹಲವು ಗ್ರಾಮಗಳು 3 ಕಿ.ಮೀ ವ್ಯಾಪ್ತಿಯೊಳಗೆ ಬರುತ್ತಿವೆ. ನಾಗಲಾಪುರ, ಮೆಣಸೂರು, ಲಿಂಗಾಪುರ ಗ್ರಾಮದಲ್ಲಿ ರೈತರು ತೋಟ, ಗದ್ದೆ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಪಟ್ಟಣದ ಹಿಂದಿನ ನಕಾಶೆಯನ್ನು ಪರಿಗಣಿಸಿ ಇವರಿಗೆ ಸಾಗುವಳಿ ಚೀಟಿ ಕೊಡಲು ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಪಟ್ಟಣ ಬೆಳೆಯದೆ ಇದ್ದರೂ ಪಟ್ಟಣದ ಗಡಿ ಮೊದಲೇ ನಿರ್ಧಾರವಾಗಿದ್ದರಿಂದ 3 ಕಿ.ಮೀ ವ್ಯಾಪ್ತಿಯೊಳಗೆ ಹಲವು ಗ್ರಾಮಗಳು ಬರುತ್ತಿವೆ. ಹಳೇ ನಕ್ಷೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಅರಣ್ಯ ಇಲಾಖೆಗೆ ಗಿಡಗಳನ್ನು ಬೆಳೆಸಲು ಹಿಂದೆ ನೀಡಿದ್ದ ಗೋಮಾಳ ಜಾಗವನ್ನು ಪುನಃ ಕಂದಾಯ ಇಲಾಖೆಗೆ ಪಡೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಹಿಂದೆ ಜಮೀನು ಮಂಜೂರಾಗಿದ್ದರೂ ಸಾಗುವಳಿ ಚೀಟಿ ನೀಡಿಲ್ಲ. ಈ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವುದು ಏಕೆ? ಸಾಗುವಳಿದಾರರು ಪ್ರಶ್ನಿಸಿದರೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಬಗರ್ ಹುಕುಂ ಸಮಿತಿ ಸದಸ್ಯ ಎಸ್.ಪೇಟೆ ಸತೀಶ್ ಮಾತನಾಡಿ, ಬಗರ್ ಹುಕುಂ ನಡಿ ಸಲ್ಲಿಸಿದ ಅರ್ಜಿಗಳು ಕಳೆದು ಹೋಗಿರುವ, ಕಡತಗಳು ನಾಪತ್ತೆಯಾಗಿರುವ ಯಾವುದಾರೂ ಪ್ರಕರಣಗಳು ಇದೆಯೇ ಎಂದು ಪ್ರಶ್ನಿಸಿದರು. ಜಿಲ್ಲೆಯ ಮೂಡಿಗೆರೆ, ಕಡೂರು ಭಾಗಗಳಲ್ಲಿ ಆಗಿರುವಂತೆ ಅಕ್ರಮವಾಗಿ ಯಾವುದೇ ಜಮೀನು ಮಂಜೂರು ಮಾಡಬಾರದು. ಕಾನೂನು ಬದ್ಧವಾಗಿರುವ ಅರ್ಜಿಗಳಿಗೆ ಮಾತ್ರ ಮಂಜೂರಾತಿ ನೀಡಬೇಕು. ಬಗರ್ ಹುಕುಂ ಸಮಿತಿಯ ಅಧ್ಯಕ್ಷರ ಗಮನಕ್ಕೆ ಬಾರದೆ ಯಾವುದೇ ಹಕ್ಕು ಪತ್ರ ವಿತರಿಸಬಾರದು ಎಂದರು.
ಫಾರಂ ನಂ 50 ಅಡಿ 6,339 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 1,293 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. 5,046 ಅರ್ಜಿಗಳು ತಿರಸ್ಕೃತವಾಗಿವೆ. ಮೇಲ್ಮನವಿ ಆದೇಶವಾಗಿರುವ 4 ಪ್ರಕರಣಗಳಲ್ಲಿ ಕಡತ ತಯಾರಿಸಲಾಗಿದೆ. 5 ಅರ್ಜಿಗಳ ಕಡತ ತಯಾರಿಸಲು ಬಾಕಿ ಇದೆ. 2 ಅರ್ಜಿಗಳು ಪಟ್ಟಣದಿಂದ 3 ಕಿ.ಮೀ ವ್ಯಾಪ್ತಿಯೊಳಗೆ ಬರುತ್ತದೆ ಎಂದು ತಿರಸ್ಕೃತವಾಗಿವೆ. ನಮೂನೆ 53 ರಲ್ಲಿ 4,620 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ 1,052 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. 1,901 ಅರ್ಜಿಗಳು ತಿರಸ್ಕೃತವಾಗಿವೆ.1,667 ಅರ್ಜಿಗಳು ಬಾಕಿಯಿದೆ. ತಂತ್ರಾಂಶದಲ್ಲಿ 207 ಅರ್ಜಿಗಳು ಅಳವಡಿಸಲಾಗಿದೆ. ಅರಣ್ಯ ಗೋಮಾಳವೆಂದು ಕಡತ ತಯಾರಿಸಲು 54 ಅರ್ಜಿಗಳು ಬಾಕಿಯಿದೆ. ತಂತ್ರಾಂಶದಲ್ಲಿ 1,460 ಅರ್ಜಿಗಳು ಅಳವಡಿಸಲು ಬಾಕಿಯಿದೆ. ಫಾರಂ 53ರ ಬಹುತೇಕ ಮೂಲ ಕಡತಗಳು ಲೋಕಾಯುಕ್ತದಲ್ಲಿ ಇರುವುದರಿಂದ ತಂತ್ರಾಂಶದಲ್ಲಿ ಅಳವಡಿಸಿಲ್ಲ. ಇದು ತಿರಸ್ಕೃತವಾಗಿಲ್ಲ ಎಂದು ಅಧಿಕಾರಿ ಸಚ್ಚಿನ್ ಮಾಹಿತಿ ನೀಡಿದರು.
ಫಾರಂ ನಂ 57ರಲ್ಲಿ ಒಟ್ಟು 9,793 ಅರ್ಜಿಗಳು ಸ್ವೀಕಾರವಾಗಿದ್ದು, ಇದರಲ್ಲಿ 8,970 ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಲಾಗಿದೆ. ಅರಣ್ಯ ಗೋಮಾಳವೆಂದು ಕಡತ ತಯಾರಿಸಲು 738 ಅರ್ಜಿಗಳು ಬಾಕಿ ಉಳಿದಿವೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಪ್ರಥಮ ಸಭೆಗೆ 16 ಕಡತಗಳು ಸಭೆ ಒಪ್ಪಿಗೆಗಾಗಿ ತಯಾರಿಸಲಾಗಿದ್ದು, ಇದರ ಬಗ್ಗೆ ಆಕ್ಷೇಪಣೆಗಳು ಇರುವುದರಿಂದ ಬಗರ್ ಹುಕುಂ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು. ಕಂದಾಯ ಸಚಿವರನ್ನು ಆಹ್ವಾನಿಸಿ ಸಾಗುವಳಿ ಚೀಟಿ ವಿತರಿಸಲಾಗುವುದು ಎಂದು ಈ.ಸಿ.ಜೋಯಿ ಹೇಳಿದರು.
ಬಗರ್ ಹುಕುಂ ಸಮಿತಿ ಸದಸ್ಯರಾದ ಹೇಮಲತಾ, ಶೇಖಬ್ದುಲ್ಲಾ, ತಹಶೀಲ್ದಾರ್ ತನುಜಾ ಟಿ.ಸವದತ್ತಿ, ಅರಣ್ಯಾಧಿಕಾರಿಗಳಾದ ಪ್ರವೀಣ್ ಕುಮಾರ್, ಆದರ್ಶ, ಕಂದಾಯ ನಿರೀಕ್ಷಕರಾದ ಮಂಜುನಾಥ್, ಮಂಜುನಾಥ್ (ಬಾಳೆಹೊನ್ನೂರು), ಗ್ರಾಮಲೆಕ್ಕಾಧಿಕಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.