ADVERTISEMENT

ಆನೆ ಸಾಪ್ಟ್ ರೀಲಿಸ್ ಕೇಂದ್ರಕ್ಕೆ ಅನುಮೋದನೆ: ಖಂಡ್ರೆ

ರೈತರ ಸಮಸ್ಯೆಗಳ ಬಗ್ಗೆ ಬಾಳೆಹೊನ್ನೂರಿನಲ್ಲಿ ಸಂವಾದ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:44 IST
Last Updated 1 ಮಾರ್ಚ್ 2026, 8:44 IST
ಸಭೆಯಲ್ಲಿ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿದರು
ಸಭೆಯಲ್ಲಿ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿದರು   

ಬಾಳೆಹೊನ್ನೂರು: 2 ಸಾವಿರ ಎಕರೆ ಪ್ರದೇಶದಲ್ಲಿ ಸಾಫ್ಟ್‌ ರಿಲೀಸ್ ಕೇಂದ್ರ ಆರಂಭಿಸಲು ಅನುಮೋದನೆ ಸಿಕ್ಕಿದ್ದು, ₹53 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಪಟ್ಟಣದ ನಾರಾಯಣ ಗುರು ಸಮುದಾಯ ಭವನದಲ್ಲಿ ಮಲೆನಾಡು ರೈತರ ಸಮಸ್ಯೆಗಳ ಬಗ್ಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧವಾಗುತ್ತಿದ್ದು, ಪುಂಡಾಟ ನಡೆಸುವ ಆನೆಗಳನ್ನು ಸೆರೆ ಹಿಡಿದು ಹಂತ –ಹಂತವಾಗಿ ಅಲ್ಲಿಗೆ ಬಿಡಲಾಗುವುದು’ ಎಂದು ಹೇಳಿದರು.

‘ಮಲೆನಾಡಿನಲ್ಲಿ ಕಾಡುಕೋಣಗಳ ಹಾವಳಿ ಮಿತಿ ಮೀರಿದೆ ಎಂಬುದು ತಿಳಿದಿದೆ. ಮಧ್ಯ ಪ್ರದೇಶದಲ್ಲಿ ಕಾಡುಕೋಣಗಳನ್ನು ಸೆರೆ ಹಿಡಿದು ಬೇರೆ ಕಡೆಗೆ ಬಿಡಲಾಗುತ್ತಿದೆ. ರಾಜ್ಯದ ಅರಣ್ಯ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಿ ತರಬೇತಿ ಕೊಡಿಸಲಾಗಿದೆ’ ಎಂದರು.

ADVERTISEMENT

ಸಂಘರ್ಷ ನಡೆಸುತ್ತಿರುವ ಪ್ರದೇಶದ ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗುವುದು. ಮಾನವ ಜೀವ ಅಮೂಲ್ಯವಾದುದು. ಜನರ ವಿರುದ್ಧ ಅರಣ್ಯ ಇಲಾಖೆ ಇಲ್ಲ ಎಂದು ಹೇಳಿದರು.

ಪ್ರತಿ ವರ್ಷ 65 ರಿಂದ 70 ಜನ ಪ್ರಾಣಿ ದಾಳಿಯಿಂದ ರಾಜ್ಯದಲ್ಲಿ ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 145 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ಕಿ.ಮೀ ಬ್ಯಾರಿಕೇಡ್ ಅಳವಡಿಸಲು ₹1.5 ಕೋಟಿ ಖರ್ಚಾಗಲಿದೆ. ಜಿಲ್ಲೆಯಲ್ಲಿ ಈ ವರ್ಷ 7.5 ಕಿ.ಮೀ ಬ್ಯಾರೀಕೇಡ್ ಅಳವಡಿಸಲು ₹11 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 65 ಆನೆಗಳು ಕಾಡಿನಿಂದ ಹೊರಗುಳಿದಿವೆ. ಅವುಗಳ ಮನಸ್ಥಿತಿ ಅಧ್ಯಯನ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸುದೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ಪ್ರಾಣಿ ಮಾನವ ಸಂಘರ್ಷದಲ್ಲಿ ಸಾವೀಗೀಡಾದ ಕುಟುಂಬಕ್ಕೆ ಈಗ ನೀಡುತ್ತಿರುವ ಪರಿಹಾರವನ್ನು ₹50 ಲಕ್ಷಕ್ಕೆ ಏರಿಸಬೇಕು. ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ನೀಡುವ ಪಿಂಚಣಿಯನ್ನು ₹20 ಸಾವಿರಕ್ಕೆ ಏರಿಸಬೇಕು. ಗಾಯಗೊಂಡವರ ಚಿಕಿತ್ಸೆಗಾಗಿ ಆಯ್ದ ಆಸ್ಪತ್ರೆಗಳಲ್ಲಿ ಅರಣ್ಯ ಇಲಾಖೆ ಶಾಶ್ವತ ನಿಧಿ ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

ಜಂಟಿ ಸರ್ವೆ ಸಂದರ್ಭದಲ್ಲಿ ಸ್ಥಳೀಯರಿಗೆ ಹಾಗೂ ಗ್ರಾಮ ಪಂಚಾಯಿತಿ ಗಮನಕ್ಕೆ ತಂದು ವಿಶೇಷ ಗ್ರಾಮಸಭೆ ಕರೆದು ಸರ್ವೆ ನಡೆಸಬೇಖು ಎಂದು ಆಗ್ರಹಿಸಿದರು.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಎಂ.ಎನ್.ನಾಗೇಶ್, ರೈತ ಹಿತರಕ್ಷಣಾ ಸಮಿತಿಯ ರತ್ನಾಕರ ಗಡಿಗೇಶ್ವರ, ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅರವಿಂದ್ ಸಿಗದಾಳ್, ಮಲೆನಾಡು–ಕರಾವಳಿ ಜನಪರ ಒಕ್ಕೂಟದ ಅನಿಲ್ ಹೊಸಕೊಪ್ಪ, ಕರ್ನಾಟಕ ಬೆಳಗಾರರ ಒಕ್ಕೂಟದ ಟಿ.ಪಿ.ಸುರೇಂದ್ರ, ಕರ್ನಾಟಕ ಜನಶಕ್ತಿ ಸಂಘಟನೆಯ ಕೆ.ಎಲ್.ಆಶೋಕ್, ಕಡೂರು ಎಮ್ಮೆದೊಡ್ಡಿಯ ಸೋಮಶೇಖರ್, ಜಿಲ್ಲಾ ನಾಗರೀಕ ರೈತ ಒಕ್ಕೂಟದ ವಿಜಯಕುಮಾರ್, ವಾಲ್ಮೀಕಿ ಸಮಾಜದ ಶ್ರೀನಿವಾಸ್, ಡಿಎಸ್‌ಎಸ್ ಸಂಘಟನೆಯ ರಾಮು ಸಮಸ್ಯೆಗಳ ಕುರಿತು ಮನವಿ ಮಾಡಿದರು.

ಶಾಸಕ ಟಿ.ಡಿ.ರಾಜೇಗೌಡ, ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಮೀಗ ಸಚಿನ್, ಸಿಸಿಎಫ್ ಯಶಪಾಲ್ ಕ್ಷೀರ ಸಾಗರ್, ಡಿಎಫ್‌ಒ ಶಿವಶಂಕರ್, ಏಳುಕೊಂಡಲ, ಸುರೇಶ್, ಅಶ್ವಜಿತ್ ಮಿಶ್ರ, ಎಚ್.ಎಂ.ಸತೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.