ADVERTISEMENT

‘ಧರ್ಮದ ಆಚರಣೆ ಬದುಕಿನ ಭಾಗ ಆಗಲಿ’

ಪೌರ್ಣಿಮಾ ಧರ್ಮ ಸಮಾರಂಭದಲ್ಲಿ ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:43 IST
Last Updated 15 ಜೂನ್ 2022, 4:43 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಸ್ವಾಮೀಜಿ ಅವರು ‘ಶಿವಶಕ್ತಿ ವೇದಾಂತ ಮತ್ತು ವಿಜ್ಞಾನ ಸಮನ್ವಯ’ ಹಾಗೂ ‘ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆಗೊಳಿಸಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಸ್ವಾಮೀಜಿ ಅವರು ‘ಶಿವಶಕ್ತಿ ವೇದಾಂತ ಮತ್ತು ವಿಜ್ಞಾನ ಸಮನ್ವಯ’ ಹಾಗೂ ‘ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆಗೊಳಿಸಿದರು.   

ರಂಭಾಪುರಿ ಪೀಠ(ಬಾಳೆಹೊನ್ನೂರು): ಸಾರ್ಥಕ ಮತ್ತು ಸಮೃದ್ಧ ಬದುಕು ಕಟ್ಟಿಕೊಳ್ಳಲು ಸಂಸ್ಕಾರ, ಸಂಸ್ಕೃತಿಗಳ ಅರಿವು– ಆಚರಣೆ ಬೇಕು. ಧರ್ಮವು ಚರ್ಚಿಸುವ ವಸ್ತುವಾಗದೆ, ಅದನ್ನು ಆಚರಿಸುವ ಜೀವನ ಎಲ್ಲರದಾಗಬೇಕು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಪೀಠದಲ್ಲಿ ಮಂಗಳವಾರ ನಡೆದ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯನಿಗೆ ಶಾಂತಿ ನೆಮ್ಮದಿಯ ಬದುಕು ಬೇಕಾಗಿದೆ. ಬದುಕು ಎಷ್ಟೇ ದುಃಖ ಮತ್ತು ನಿರಾಶಯವಾಗಿದ್ದರೂ, ಬದುಕಿನ ಬೆಲೆ ದೊಡ್ಡದು. ದಯೆ ಕ್ಷಮೆ, ಔದಾರ್ಯದ ಆಗರವಾಗಿ ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಅದ್ಭುತ ಶಕ್ತಿ ಇದ್ದರೂ ಗೊತ್ತು ಗುರಿ ಇಲ್ಲದೇ, ಬದುಕು ಅತೃಪ್ತಿಯಿಂದ ಕೂಡಿದೆ. ದೇಶ ಧರ್ಮ ಮತ್ತು ಸಂಸ್ಕೃತಿ ಕಟ್ಟಿ ಬೆಳೆಸುವ ಶಕ್ತಿ ಯುವ ಜನಾಂಗದಲ್ಲಿ ಬೆಳೆಯಬೇಕಾಗಿದೆ ಎಂದರು.

‘ಎಲ್ಲೆಡೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತಿಯ ಸಂಘರ್ಷಗಳು ಹೆಚ್ಚಾಗಿ ಅಶಾಂತಿ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಜಗದ ಜಂಜಡವ ಪರಿಹರಿಸಿ ಅಹಿಂಸೆಯ ಮಾರ್ಗ ತೋರಿ ಸಮನ್ವಯ ಶಾಂತಿ ಸಂದೇಶ ನೀಡಿದ ಹಿರಿಯರ ಕೊಡುಗೆ ಕಣ್ಮುಂದೆ ಇದೆ. ದುಶ್ಚಟಗಳಿಗೆ ಬಲಿಯಾಗದೇ ಸಾತ್ವಿಕ ಮಾರ್ಗದಲ್ಲಿ ನಡೆದು ಆದರ್ಶ ಬದುಕು ಕಟ್ಟಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

ಇದೇ ಸಂದರ್ಭದಲ್ಲಿ ‘ಶಿವಶಕ್ತಿ ವೇದಾಂತ ಮತ್ತು ವಿಜ್ಞಾನ ಸಮನ್ವಯ’ ಹಾಗೂ ‘ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆಗೊಳಿಸಿದರು.
ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದ ಮಠಸ್ಥರು ಮತ್ತು ಭಕ್ತರು ಸೇರಿ ಗ್ರಾಮಕ್ಕೆ ಬರುವಂತೆ ವಿನಂತಿಸಿಕೊಂಡರು. ಸಂಗೊಳ್ಳಿ, ನುಗ್ಗೇಹಳ್ಳಿ, ರಾಯಚೂರು ಮಂಗಳವಾರ ಪೇಟೆ, ರೌಡಕುಂದ, ಪಾಲ್ತೂರು, ಮಾಜಲಗಾಂವ ಮಠದ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಮಲೆಬೆನ್ನೂರಿನ ಬಿ.ಎಂ.ನಂಜಯ್ಯ ಮತ್ತು ಮಕ್ಕಳು ಅನ್ನದಾಸೋಹ ನೆರವೆರಿಸಿದರು. ಬೆಳಿಗ್ಗೆ ಪೀಠದ ಎಲ್ಲ ದೇವರಿಗೆ ವಿಶೇಷ ಪೂಜೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.