
ಬಾಳೆಹೊನ್ನೂರು (ಚಿಕ್ಕಮಗಳೂರು): ‘ಮಾನವನು ಕೆಟ್ಟವನಲ್ಲ; ಆತನಲ್ಲಿರುವ ಅಜ್ಞಾನದ ಕತ್ತಲೆ ಆತನನ್ನು ಕೆಡಿಸಿದೆ. ರಾಗಾದಿ ಬಂಧನದ ಭೂಮಿಯಾದ ಈ ಅಜ್ಞಾನದ ರಾಡಿಯನ್ನು ಮನುಷ್ಯ ಮೊದಲು ಕಳೆದುಕೊಳ್ಳಬೇಕು. ನಿಜವಾದ ವಿದ್ಯೆ ಬೆಳಕಿನ ಹೊಳೆ. ಅದರಲ್ಲಿ ಮಿಂದು ಬಂದವನು ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ಶನಿವಾರ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಡೆದ ಧರ್ಮ ಮತ್ತು ಶಿಕ್ಷಣ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಾಪಂಚಿಕ ಸಂಪತ್ತನ್ನು ಸಂಪಾದಿಸಿದಾಗ ನಮ್ಮ ಬದುಕು ವೈಭವಪೂರ್ಣವಾಗುತ್ತದೆ. ಪಾರಮಾರ್ಥಿಕ ಸಂಪತ್ತನ್ನು ಸಂಪಾದಿಸಿದಾಗ ನಮ್ಮ ಬದುಕು ಅನುಭಾವ ಪೂರ್ಣವಾಗುತ್ತದೆ. ಭವ್ಯ ಮನೆ, ಕೈತೋಟ, ಬೆಲೆ ಬಾಳುವ ಉಡುಗೆ ತೊಡುಗೆಯು ಸುಖಮಯ ಜೀವನಕ್ಕೆ ಮೂಲವಾದರೆ ಪ್ರಾಪಂಚಿಕವಾದ ಎಲ್ಲ ವಿದ್ಯೆಗಳಿಗೆ ಪ್ರಾಣ ಸ್ವರೂಪವಾಗಿರುವ ಆಧ್ಯಾತ್ಮದ ಅರಿವು ನಿಜವಾದ ವಿದ್ಯೆ ಎಂಬುದನ್ನು ಮರೆಯಲಾಗದು ಎಂದರು.
ವೀರಶೈವ ಧರ್ಮದ ಪೀಠ ಮಠಗಳು ಹಾಗೂ ಆಧ್ಯಾತ್ಮ ಕೇಂದ್ರಗಳು ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿವೆ. ಮನುಷ್ಯನ ಜೀವನದ ವಿಕಾಸಕ್ಕೆ ಮತ್ತು ಉನ್ನತಿಗೆ ಶಿಕ್ಷಣ ಅವಶ್ಯಕ. ಭೌತಿಕ ವಿದ್ಯೆಯಿಂದ ಸಿರಿ ಸಂಪತ್ತು ಹೊಂದಿ ಸುಖ ಜೀವನ ನಡೆಸಬಹುದು. ಭೌತಿಕ ಶಿಕ್ಷಣದ ಜೊತೆಗೆ ಒಂದಿಷ್ಟಾದರೂ ಸಂಸ್ಕಾರಯುಕ್ತ ಶಿಕ್ಷಣ ಪಡೆದರೆ ಬದುಕು ಹಸನಗೊಳ್ಳುವುದು ಎಂದು ಅವರು ಹೇಳಿದರು.
ಸಮಾರಂಭ ಉದ್ಘಾಟಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ವೀರಶೈವ ಲಿಂಗಾಯತ ಧರ್ಮಕ್ಕೆ ಬಹು ದೊಡ್ಡ ಇತಿಹಾಸ, ಭವ್ಯ ಪರಂಪರೆಯಿದೆ. ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತದ ಮೂಲ ಪರಮಾಚಾರ್ಯರು. ಜಾತಿ ಮತ ಪಂಥಗಳನ್ನು ಮೀರಿ ಆಧ್ಯಾತ್ಮದ ಜ್ಞಾನವನ್ನು ಬೋಧಿಸುವುದರ ಮೂಲಕ ಎಲ್ಲೆಡೆ ಸಾಮರಸ್ಯ ಸೌಹಾರ್ದ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಲೆನಾಡಿನಲ್ಲಿ ಕಾಡು ಪ್ರಾಣಿಗಳಿಂದ ಮತ್ತು ಆನೆಗಳಿಂದ ಜನರಿಗೆ ಭೀತಿ ಆವರಿಸಿದೆ. ಇಲಾಖೆಯಿಂದ ಇವುಗಳನ್ನು ಸರಿಪಡಿಸಿ ಜನರ ಬದುಕಿನಲ್ಲಿ ನೆಮ್ಮದಿ ಉಂಟು ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಸಮಾಜವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಜವಾಬ್ದಾರಿ ಅ.ಭಾ.ವೀರಶೈವ-ಲಿಂಗಾಯತ ಮಹಾಸಭಾದ ಮೇಲಿದೆ. ಹಲವಾರು ದಿಕ್ಕಿನಲ್ಲಿ ಸಮಾಜದ ಅಭಿವೃದ್ಧಿಯ ಗುರಿಯನ್ನು ಮಹಾಸಭಾ ಹೊಂದಿದೆ ಎಂದರು.
ಬೆಳಿಗ್ಗೆ ಕುಂಕುಮೋತ್ಸವ ನಡೆಯಿತು. ಸಂಜೆ ಕ್ಷೇತ್ರನಾಥ ವೀರಭದ್ರಸ್ವಾಮಿ ಚಿಕ್ಕರಥೋತ್ಸವ ನಡೆಯಿತು. ಸಮಾರಂಭಕ್ಕೂ ಮುನ್ನ ಸೋಮೇಶ್ವರ ದೇವಸ್ಥಾನದಿಂದ ಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಸ್ಥಾನದವರೆಗೆ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ. ಲೋಕೇಶ್, ಶಾಸಕ ಟಿ.ಡಿ. ರಾಜೇಗೌಡ, ರೇಣುಕಾಚಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ. ಬಸವರಾಜ, ಸುಧೀರ, ಬಿ.ಜಗದೀಶ್ಚಂದ್ರ, ಕೋಕಿಲ ಲಿಂಗಪ್ಪಗೌಡ್ರು, ಮಹೇಶ ಆಚಾರ್ಯ, ಎಲ್.ರವಿ, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಸಿಂದಗಿ ಪ್ರಭು ಸಾರಂಗದೇವ ಶಿವಾಚಾರ್ಯ, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ, ಮಳಲಿ ನಾಗಭೂಷಣ ಶಿವಾಚಾರ್ಯ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ, ಬೀರೂರಿನ ರುದ್ರಮುನಿ ಶಿವಾಚಾರ್ಯ, ಹರಪನಹಳ್ಳಿಯ ವರಸದ್ಯೋಜಾತ ಶಿವಾಚಾರ್ಯ, ಮಾನಿಹಳ್ಳಿಮಠದ ಮಳೆಯೋಗೀಶ್ವರ ಶಿವಾಚಾರ್ಯ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ, ಸಿಂಧನೂರು-ಕನ್ನೂರು ಸೋಮನಾಥ ಶಿವಾಚಾರ್ಯ, ಮಳಖೇಡದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಚಿಕ್ಕಮಗಳೂರಿನ ಚಂದ್ರಶೇಖರ ಶಿವಾಚಾರ್ಯ, ಮಾಗಣಗೇರಿ ಏಕಾಕ್ಷರ ಶಿವಾಚಾರ್ಯ, ದೋರನಹಳ್ಳಿಅಭಿನವ ಮಹಾಂತೇಶ್ವರ ಶಿವಾಚಾರ್ಯ ಹಿರೇತೊಗಲೇರಿಯ ವಿಶ್ವನಾಥ, ಚನಬಸಯ್ಯ ಹಿರೇಮಠ, ವಂದನಾ ಹಿರೇಮಠ, ಅನಿತಾ ಸಿ.ಜಿ., ನೇಹಾಜೆ, ಧನ್ಯಾ, ಚಿಕ್ಕಮಗಳೂರಿನ ಬಿ.ಎ. ಶಿವಶಂಕರ, ಹಾವೇರಿಯ ಶಿವಬಸವ ಬಣಕಾರ, ಸವಣೂರಿನ ಡಾ.ಗುರುಪಾದಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.