ಮೂಡಿಗೆರೆ: ಬ್ಯಾರಿ ಸಮುದಾಯದ ಅಭಿವೃದ್ಧಿಗೆ ಕೂಡಲೇ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಕೆ. ಮಹಮ್ಮದ್ ಒತ್ತಾಯಿಸಿದರು.
ಬ್ಯಾರಿ ಒಕ್ಕೂಟದಿಂದ ನಡೆದ ಬ್ಯಾರಿ ಭಾಷಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಬ್ಯಾರಿ ಸಮುದಾಯಕ್ಕೆ ಸರ್ಕಾರದಿಂದ ಯಾವುದೇ ಸವಲತ್ತು ದೊರೆಯುತ್ತಿಲ್ಲ. ಇದರಿಂದ ಸಮುದಾಯವು ಹಿಂದುಳಿಯಲು ಕಾರಣವಾಗಿದೆ’ ಎಂದರು.
2007ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಿರುವ ಸರ್ಕಾರ, ಅದನ್ನು ಸಮುದಾಯಕ್ಕೆ ಒಪ್ಪಿಸಿದ ದಿನವನ್ನು ಬ್ಯಾರಿ ಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಿಂದ ಬ್ಯಾರಿ ಭಾಷೆ ಉನ್ನತ ಮಟ್ಟಕ್ಕೇರಲು ಕಾರಣವಾಗಿದೆ. ಬ್ಯಾರಿ ಭಾಷಿಕರು ಹೆಚ್ಚಾಗಿ ಸ್ವಂತ ಉದ್ಯೋಗವನ್ನೇ ಕಂಡುಕೊಂಡಿದ್ದಾರೆ. ವಿದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಬ್ಯಾರಿ ಸಮುದಾಯದವರು ದುಡಿಯುತ್ತಿರುವುದರಿಂದ ಭಾರತಕ್ಕೆ ವಿದೇಶಿ ವಿನಿಮಯ ಹರಿದು ಬರುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ಬ್ಯಾರಿ ಸಮುದಾಯದಿಂದ ಬರುತ್ತಿದೆ. ಆದ್ದರಿಂದ ಸಮುದಾಯದ ಅಭಿವೃದ್ಧಿಗೆ ಬ್ಯಾರಿ ಅಭಿವೃದ್ಧಿ ನಿಗಮ ಅಗತ್ಯ ಎಂದು ತಿಳಿಸಿದರು.
ಬ್ಯಾರಿ ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಕಿರುಗುಂದ ಅಬ್ಬಾಸ್ ಮಾತನಾಡಿ, ‘ದ್ರಾವಿಡ ಸಂಸ್ಕೃತಿ ಒಳಗೊಂಡಿರುವ ಬ್ಯಾರಿ ಭಾಷೆಗೆ 1,200 ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ 30 ಲಕ್ಷ ಮಂದಿ ಬ್ಯಾರಿ ಭಾಷೆ ಮಾತನಾಡುವವರಿದ್ದಾರೆ. 16ನೇ ಶತಮಾನದಲ್ಲಿ ಉಳ್ಳಾಲದ ಚೌಟ ವಂಶಕ್ಕೆ ಸೇರಿದ ಅಬ್ಬಕ್ಕ ರಾಣಿಯ ಸೇನೆಯಲ್ಲಿ ಹೆಚ್ಚಾಗಿ ಬ್ಯಾರಿ ಸಮುದಾಯದ ಸೈನಿಕರಿದ್ದರು. 40 ವರ್ಷ ಪೋರ್ಚುಗೀಸರ ವಿರುದ್ಧ 6 ಬಾರಿ ಯುದ್ಧ ನಡೆಸಿ ರಾಣಿ ಅಬ್ಬಕ್ಕ ಅವರನ್ನು ರಕ್ಷಿಸಿದ್ದಾರೆ. ಇಂತಹ ತ್ಯಾಗ ಮಾಡಿರುವ ಬ್ಯಾರಿ ಸಮುದಾಯವನ್ನು ಸರ್ಕಾರ ದೂರವಿಡುವುದು ಸರಿಯಲ್ಲ’ ಎಂದರು.
ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ. ನಾಸೀರ್ ಇಂಪಾಲ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್, ಮುಖಂಡರಾದ ಸಿ.ಎಸ್. ಖಲಂದರ್, ಅಲ್ತಾಫ್ ರೆಹಮಾನ್, ಮಹಮ್ಮದ್ ರಫೀಕ್, ಬಿ.ಎಂ. ಮಹಮ್ಮದ್, ಫಾರೂಕ್ ಬಣಕಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.