
ಚಿಕ್ಕಮಗಳೂರು: ಅಯ್ಯನಕೆರೆ ಕೋಡಿಯಿಂದ ಹರಿಯುವ ನೀರನ್ನು ನಾಗೇನಹಳ್ಳಿ ಮತ್ತು ಹುಲಿಕೆರೆ ಸಮೀಪದ ಬೆರಟಿಕೆರೆಗೆ ತುಂಬಿಸುವ ಯೋಜನೆ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ಈ ಭಾಗದ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ನಾಗೇನಹಳ್ಳಿ ಹಾಗೂ ಬೆರಟಿಕೆರೆ ನೀರು ತುಂಬಿಸುವ ಹೋರಾಟ ಸಮಿತಿ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸಿದರು. ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ‘ಹಲವು ವರ್ಷಗಳಿಂದ ಹುಲಿಕೆರೆ, ಬೆರಟಿಕೆರೆ ಹಾಗೂ ನಾಗೇನಹಳ್ಳಿ ಗ್ರಾಮದ ಕೆರೆಗಳು ತುಂಬಿಲ್ಲ. ಸುತ್ತಮುತ್ತ ಬರಗಾಲದ ವಾತಾವರಣವಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಜಿಲ್ಲಾಡಳಿತ ಒದಗಿಸುತ್ತಿದೆ’ ಎಂದರು.
ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ತಾತ್ಕಾಲಿಕವಾಗಿ ಲಭ್ಯವಾದರೆ, ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಾಗಿದೆ. ಅಯ್ಯನಕೆರೆ ಕೋಡಿ ನೀರು ಎರಡೂವರೆ ತಿಂಗಳಿನಿಂದ ಹರಿದು ಹೋಗುತ್ತಿದೆ. ಸ್ಥಳೀಯ ರೈತರ ಕೃಷಿ ಚಟುವಟಿಕೆಗೆ ನೀಡದೆ ಸರ್ಕಾರ ವಂಚಿಸುತ್ತಿದೆ. ಇದರಿಂದಾಗಿ ನಾಗೇನಹಳ್ಳಿ, ಹುಲಿಕೆರೆ ಸುತ್ತಮುತ್ತಲ ಗ್ರಾಮಗಳು ಬರಗಾಲಕ್ಕೆ ತುತ್ತಾಗಿವೆ ಎಂದು ಹೇಳಿದರು.
ಈ ಯೋಜನೆಯ ಉದ್ದೇಶ ಕೆರೆಗಳನ್ನು ತುಂಬಿಸುವ ಮೂಲಕ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವುದಾಗಿದೆಯೇ ಹೊರತು ಕೃಷಿಗೆ ನೀರಾವರಿ ಕಲ್ಪಿಸುವ ಉದ್ದೇಶವಿಲ್ಲ. ಅಯ್ಯನಕೆರೆ ಕೋಡಿ ಬಿದ್ದು ಹರಿಯುವ ನೀರಿನಲ್ಲಿ ಅಲ್ಪ ಪ್ರಮಾಣವನ್ನಷ್ಟೇ ಬಳಸಲಾಗುತ್ತಿದೆ. ಕೆರೆಗಳು ತುಂಬಿದ ನಂತರ ಮತ್ತೆ ವೇದಾ ಹಳ್ಳಕ್ಕೇ ನೀರು ಹರಿಯುವುದರಿಂದ ಯಾರಿಗೂ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
ಅಂದಾಜು ₹9.90 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಕಾಮಗಾರಿಯೂ ಆರಂಭಗೊಂಡಿತ್ತು. ತಪ್ಪು ಮಾಹಿತಿಯಿಂದ ಕೆಲವರು ವಿರೋಧಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಯೋಜನೆಯ ಉದ್ದೇಶವನ್ನು ಕೆಳಭಾಗದ ಹಳ್ಳಿಗಳ ರೈತರಿಗೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಮಾತನಾಡಿ, ‘ರೈತರು ಸಂಘಟಿತರಾಗಿ ಹೋರಾಟ ರೂಪಿಸಿದಾಗ ಮಾತ್ರ ನೀರಾವರಿ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಗ್ರಾಮದ ಕೆರೆಗಳು ನೀರು ತುಂಬಿಸಿ ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ತಲುಪುವುದು ಗುರಿಯಾಗಬೇಕು’ ಎಂದರು.
ರೈತ ಮುಖಂಡ ವಿಜಯಕುಮಾರ್, ರುದ್ರಮೂರ್ತಿ, ಮೋಹನಕುಮಾರ್, ಅಣ್ಣಾನಾಯ್ಕ, ಉಮೇಶ್, ಸಚಿನ್ ಎತ್ತಿನಮನೆ, ಚಂದ್ರು ಹುಲಿಕೆರೆ, ಮುಳ್ಳಪ್ಪ, ಪುಷ್ಪರಾಜ್ ಭಾಗವಹಿಸಿದ್ದರು.
ಒಂದು ತಿಂಗಳ ಗಡುವು
ಒಂದು ತಿಂಗಳ ಗಡುವಿನೊಳಗೆ ಕಾಮಗಾರಿ ಪುನರ್ ಆರಂಭಿಸಬೇಕು. ಇಲ್ಲದಿದ್ದರೆ ಶಾಸಕರು ಹಾಗೂ ಸರ್ಕಾರಿ ಕಚೇರಿಗಳ ಎದುರು ಜಾನುವಾರು ಸಹಿತ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ತಿಳಿಸಿದರು. ಬಯಲು ಸೀಮೆಯಿಂದ ಬೆಂಗಳೂರಿನ ತನಕ ಹರಿಯುತ್ತಿರುವ ನೀರನ್ನು ಸರ್ಕಾರ ಸ್ಥಳೀಯರಿಗೆ ಬೊಗಸೆಯಷ್ಟು ಉಳಿಸಿಕೊಡಬೇಕು ಎಂದರು. ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ ‘ಜಿಲ್ಲೆಯು ಪಂಚನದಿಗಳ ಉಗಮ ಸ್ಥಾನವಾಗಿದೆ. ನೂರಾರು ಟಿಎಂಸಿ ನೀರು ವಿವಿಧ ಜಿಲ್ಲೆ ಸೇರಿದಂತೆ ಆಂಧ್ರಪದೇಶ ಮತ್ತು ತಮಿಳುನಾಡಿಗೆ ಹರಿಯುತ್ತಿದೆ. ಆದರೆ ಬಯಲುಸೀಮೆ ರೈತರಿಗೆ ಅಲ್ಪಪ್ರಮಾಣದ ನೀರು ಒದಗಿಸದೇ ಸರ್ಕಾರ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಹೇಳಿದರು. ಕೇವಲ ಮಳೆ ಆಶ್ರಯದಲ್ಲಿ ಬೆಳೆ ಬೆಳೆಯುತ್ತಿದ್ದ ರೈತರಿಗೆ ನೀರಿನ ಬೆಲೆ ಗೊತ್ತಾಗಿದೆ. ಸರ್ಕಾರ ಕಟ್ಟುನಿಟ್ಟಿನ ಕಾನೂನು ರೂಪಿಸಿ ಸ್ಥಳೀಯರಿಗೆ ನೀರು ಒದಗಿಸಬೇಕು. ಈ ಯೋಜನೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಅಯ್ಯನಕೆರೆ ಬೊಗಸೆ ನೀರಿಗಷ್ಟೆ ಆಸೆಪಟ್ಟಿರುವ ರೈತರಿಗೆ ಜನಪ್ರತಿಧಿಗಳು ಜವಾಬ್ದಾರಿ ಹೊತ್ತು ನ್ಯಾಯ ಒದಗಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.