ADVERTISEMENT

ಭದ್ರಾ ಮೇಲ್ದಂಡೆ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣ: ಶಾಸಕ ಆನಂದ್‌

ಎಕರೆಗೆ ₹42 ಲಕ್ಷ ನಿಗದಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:30 IST
Last Updated 10 ಆಗಸ್ಟ್ 2025, 5:30 IST
ಕಡೂರು ತಾಲ್ಲೂಕು ಮಾಡಾಳು ಗ್ರಾಮಕ್ಕೆ ₹2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶನಿವಾರ ಶಾಸಕ ಕೆ.ಎಸ್‌.ಆನಂದ್‌ ಭೂಮಿಪೂಜೆ ನೆರವೇರಿಸಿದರು
ಕಡೂರು ತಾಲ್ಲೂಕು ಮಾಡಾಳು ಗ್ರಾಮಕ್ಕೆ ₹2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶನಿವಾರ ಶಾಸಕ ಕೆ.ಎಸ್‌.ಆನಂದ್‌ ಭೂಮಿಪೂಜೆ ನೆರವೇರಿಸಿದರು   

ಕಡೂರು: ‘ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಕಾಮಗಾರಿ ನನೆಗುದಿಗೆ ಬೀಳಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಕಾರಣವಾಗಿದ್ದು, ಈಗ ಅದನ್ನು ಬಗೆಹರಿಸಲಾಗಿದೆ’ ಎಂದು ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

ಮಾಡಾಳು ಗ್ರಾಮದಲ್ಲಿ ಶನಿವಾರ ₹2 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಿಂದ ಮಾಡಾಳನ್ನು ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಯಳಗೊಂಡನಹಳ್ಳಿ, ಯಳ್ಳಂಬಳಸೆ, ಮತಿಘಟ್ಟ, ವೈ.ಮಲ್ಲಾಪುರ, ಚಿಕ್ಕಬಾಸೂರು ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ದರ ನಿಗದಿ ವಿಷಯದಲ್ಲಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದ ಕಾರಣ, ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬವಾಗಿತ್ತು. ಈಗ ನ್ಯಾಯಾಲಯದಲ್ಲಿ ಪ್ರಕರಣ ಮುಗಿದಿದ್ದು, ಇಲಾಖೆ ಅಧಿಕಾರಿಗಳು ಮತ್ತು ರೈತರ ನಿಯೋಗ ತಮ್ಮನ್ನು ಭೇಟಿಯಾಗಿ ಮಾತುಕತೆ ಮುಖಾಂತರ ಪರಿಹಾರ ಕಂಡುಕೊಂಡಿದ್ದು ಎಕರೆಗೆ ₹42 ಲಕ್ಷ ನಿಗದಿ ಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಮುಂದುವರೆದು ರೈತರಿಗೆ ಪರಿಹಾರವೂ ದೊರೆತು ಕಾಮಗಾರಿ ಮುಂದುವರೆಯಲಿದೆ’ ಎಂದು ಭರವಸೆ ನೀಡಿದರು.

ADVERTISEMENT

‘ಮಾಡಾಳು ಗ್ರಾಮದಲ್ಲಿ ಹಲವು ವರ್ಷಗಳಿಂದ ನಿವೇಶನ ವಿತರಣೆಯಾಗಿಲ್ಲ, ಜನಸಂಖ್ಯೆ ಹೆಚ್ಚುತ್ತಿದೆ. ಸಣ್ಣ ಮನೆಗಳಲ್ಲಿ ಎಲ್ಲರೂ ಒಟ್ಟಾಗಿ ವಾಸ ಮಾಡುವ ಸ್ಥಿತಿ ಇದೆ ಎನ್ನುವ ಮಾಹಿತಿ ಇದೆ. ಗ್ರಾಮಕ್ಕೆ ಸೇರಿದಂತೆ 22 ಎಕರೆ ಮೀಸಲು ಭೂಮಿ ಇದ್ದು, ಅದರಲ್ಲಿ 4 ಎಕರೆಯನ್ನು ಮಾಡಾಳು ಗ್ರಾಮದಲ್ಲಿ ನಿವೇಶನಕ್ಕೆ, 5 ಎಕರೆ ಭೂಮಿಯನ್ನು ಶಾಲಾ ಆಟದ ಮೈದಾನಕ್ಕೆ ಹಾಗೂ ರಸ್ತೆ ನಿರ್ಮಿಸಲು ಭೂಮಿ ಬಿಟ್ಟುಕೊಟ್ಟ ಬೀರನಹಳ್ಳಿಯ ರೈತನಿಗೆ ಪರಿಹಾರವಾಗಿ 4 ಎಕರೆ ಭೂಮಿಯನ್ನು ನೀಡಲು ಗ್ರಾಮಸ್ಥರ ಒತ್ತಾಯಕ್ಕೆ ಮಣಿಯಲಾಗಿದೆ. ನಿವೇಶನ ಭೂಮಿ ಗುರುತಿಸಿ, ತಹಶೀಲ್ದಾರ್‌ರಿಂದ ಅನುಮೋದನೆ ಪಡೆದು ನಂತರ ರಾಜೀವಗಾಂಧಿ ವಸತಿ ನಿಗಮದ ಮೂಲಕ ನಿವೇಶನ ಹಂಚಿಕೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ.ನಾಗೇಂದ್ರಪ್ರಸಾದ್‌, ಎಂ.ವಿ.ನವೀನ್‌, ಪಂಚಾಯಿತಿ ಸದಸ್ಯರಾದ ಮಹೇಶ್‌, ಗಂಗಾನಾಯ್ಕ, ತಿಮ್ಮಾನಾಯ್ಕ, ರುಕ್ಮಿಬಾಯಿ, ಗೋವಿಂದನಾಯ್ಕ, ಕುಮಾರ್‌ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ದೊಣ್ಣೆಕೋರನಹಳ್ಳಿ ಉಮೇಶ್‌ ಮತ್ತು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಮಂಜುನಾಥ್‌, ಗ್ರಾಮಸ್ಥರಾದ ನಮಿತ್‌, ಜಯಪ್ಪ, ಪ್ರಕಾಶ್‌, ರಾಮಣ್ಣ, ಗಂಗಾಧರಪ್ಪ, ಹೊಸೂರು ಕುಮಾರ್‌ ಇದ್ದರು.

ಗ್ರಾಮದಲ್ಲಿ ಶಿಕ್ಷಣ ವಸತಿಗೆ ಒತ್ತು

‘ಮಾಡಾಳು ಗ್ರಾಮಕ್ಕೆ ಮೊದಲ ಹಂತದಲ್ಲಿ ₹2 ಕೋಟಿ ವೆಚ್ಚದಲ್ಲಿ ಸ್ವಲ್ಪಭಾಗ ರಸ್ತೆ ಮಾಡಲಾಗಿತ್ತು. ಇದೀಗ ₹2 ಕೋಟಿ ವೆಚ್ಚದಲ್ಲಿ ರಸ್ತೆ ಸಂಪೂರ್ಣಗೊಳಿಸಲಾಗುತ್ತಿದೆ. ಗ್ರಾಮದಲ್ಲಿ ಶಿಕ್ಷಣ ವಸತಿಗೆ ಒತ್ತು ನೀಡಲಾಗಿದೆ. ಸಮುದಾಯ ಭವನಕ್ಕೆ ಕೋರಿಕೆ ಹಾಗೂ ಗ್ರಾಮದ ಒಳಗೆ ಸಿ.ಸಿ ರಸ್ತೆ ಆಸ್ಪತ್ರೆ ಬೀದಿ ದೀಪ ಮತ್ತು ಶುದ್ಧಗಂಗಾ ಘಟಕ ಸ್ಥಾಪನೆ ಹಾಗೂ ಆವತಿ ನದಿಗೆ ಬ್ಯಾರೇಜ್‌ ನಿರ್ಮಿಸುವಂತೆ ಮನವಿ ಮಾಡಿದ್ದೀರಿ. ಹಂತ ಹಂತವಾಗಿ ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗುವುದು. ಸಮುದಾಯ ಭವನಕ್ಕೆ ಜಾಗ ಗುರುತಿಸಿ ಒಮ್ಮನಸ್ಸಿನಿಂದ ಗ್ರಾಮ ಪಂಚಾಯಿತಿಯವರು ಬಂದರೆ ಪರಿಹಾರ ಒದಗಿಸಲಾಗುವುದು’ ಎಂದು ಶಾಸಕ ಕೆ.ಎಸ್‌.ಆನಂದ್‌ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.