ADVERTISEMENT

ಭೀಮಾ ಕೋರೆಗಾಂವ್ ವಿಜಯೋತ್ಸವ ಜಾಗೃತಿ ಉತ್ಸವ ಆಗಬೇಕು: ಸ್ವಾಮೀಜಿ

208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 3:57 IST
Last Updated 8 ಜನವರಿ 2026, 3:57 IST
 208ನೇ ಭೀಮಾ ಕೊರೆಗಾಂವ್ ವಿಜಯೋತ್ಸವವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
 208ನೇ ಭೀಮಾ ಕೊರೆಗಾಂವ್ ವಿಜಯೋತ್ಸವವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಚಿಕ್ಕಮಗಳೂರು: ಭೀಮಾ‌ ಕೋರೆಂಗಾವ್ ವಿಜಯೋತ್ಸವ ಹೊಸ ಪೀಳಿಗೆಗೆ ಜಾಗೃತಿ ಉತ್ಸವವಾಗಬೇಕು ಎಂದು ಸಾಣೇಗಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಭೀಮಾ ಕೋರೆಂಗಾವ್‌ ವಿಜಯೋತ್ಸವ ಆಚರಣ ಸಮಿತಿಯಿಂದ ನಗರ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾತಿಯ ಭೂತ ಹನ್ನೆರಡನೇ ಶತಮಾನದಲ್ಲೇ ಇತ್ತ. ಮನುಷ್ಯ– ಮನುಷ್ಯರ ನಡುವೆ ಮಾನವೀಯತೆ, ಅಂತಕರಣ‌ ಬಹುತೇಕ ಕಳೆದುಕೊಂದಿದ್ದಾರೆ. ನಾನು ಮೇಲು ನೀನು ಕೀಳು ಎಂಬ ಭಾವನೆಯಲ್ಲಿದ್ದಾರೆ. ಇದರಿಂದ ಹೊರ ಬರಬೇಕಾದ ಅಗತ್ಯವಿದೆ’ ಎಂದರು.

ADVERTISEMENT

ಬ್ರಾಹ್ಮಣ, ಕ್ಷತ್ರಿಯ, ಶೂದ್ರ ಎಂದು ವಿಂಗಡಿಸಿ ಮಾಡಿರುವ ದಬ್ಬಾಳಿಕೆ ಮರೆಯುವಂತಿಲ್ಲ. ಕೊರಳಿಗೆ ಗಡಿಗೆ, ಬೆನ್ನಿಗೆ ಪೊರಕೆ ಕಟ್ಟಿಕೊಂಡು ಓಡಾಡಿದ ದಿನಗಳಿವೆ. ಬಸವಣ್ಣ 12ನೇ ಶತಮಾನದಲ್ಲಿ ಇದೆಲ್ಲವನ್ನೂ ವಿರೋಧ ಮಾಡಿದರು. ನೀರಿಗೆ ಜಾತಿ ಇಲ್ಲ, ನೆಲಕ್ಕೆ ಜಾತಿ ಇಲ್ಲ ಮನುಷ್ಯನಿಗೆ ಏಕೆ ಜಾತಿ ಎಂದು ಬಸವಣ್ಣ ಕೇಳಿದ್ದರು. ವಿವೇಕ, ನೀತಿ, ಹೋರಾಟದ ಗುಣಗಳನ್ನು ಯುವ ಪೀಳಿಗೆ ಬೆಳಸಿಕೊಳ್ಳಬೇಕು ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣನನ್ನು ವಿರೋಧಿಸಿದ ವರ್ಗ ಇಂದು ಅವರನ್ನು ತಮ್ಮ ಕಬ್ಜಕ್ಕೆ ತಗೆದುಕೊಳ್ಳುವ ಯತ್ನ ನಡೆಸುತ್ತಿದೆ. 12 ಮತ್ತು 21ನೇ ಶತಮಾನಕ್ಕೆ ಹೆಚ್ಚು ಬದಲಾವಣೆ ಇಲ್ಲ. 12ನೇ ಶತಮಾನದಲ್ಲಿದ್ದ ಸಮಸ್ಯೆಗಳು ಇನ್ನಷ್ಟು ಉಜ್ವಲಿಸುತ್ತಿದೆ ಎಂದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಭಾರತ ಚರಿತ್ರಯಲ್ಲೇ ಬ್ರಿಟಿಷರ ವಿರುದ್ಧ ಸಮಾನತೆ, ಸ್ವಾಭಿಮಾನಕ್ಕಾಗಿ ನಡೆದ ಹೋರಾಟಗಳಲ್ಲಿ ಈ ಭೀಮಾ ಕೋರೆಂಗಾವ್ ವಿಜಯೋತ್ಸವ ಮಹತ್ವದ್ದಾಗಿದೆ ಎಂದರು.

ಯಾರ ಸ್ವಾರ್ಥಕ್ಕಾಗಿ ಈ ಕಾರ್ಯಕ್ರಮ ಅಲ್ಲ. ಸಿದ್ಧನಾಕ ಹಾಗೂ ರಾಜನಾಕ ಅವರು ಅಂದು ರಾಜ್ಯ ಕೇಳಲಿಲ್ಲ. ಎಲ್ಲರಂತೆ ಸಮಾನವಾಗಿ ಬಾಳಲು ಅವಕಾಶಕೊಡಿ ಹಾಗೂ ಮಡಿದವರಿಗೆ ಪರಿಹಾರ ಕೊಡಿ ಎಂದು ಕೇಳಿದರು. ಇದು ಮಹಾರ್ ಸೈನಿಕರು ಸಮಾನತೆಗಾಗಿ ನಡೆಸಿದ ಯುದ್ಧ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಕೆಇಬಿ ವೃತ್ತದಿಂದ ಎಂ.ಜಿ. ರಸ್ತೆ ತನಕ ದಲಿತ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಡಿ.ಜೆ ಸದ್ದಿಗೆ ಯುವಕರು ಕುಣಿದರು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಕಾರ್ಯಕ್ರಮ‌ಲ್ಲಿ ಕಾಂಗ್ರೆಸ್ ಮುಖಂಡ ಬಿ.ಬಿ ನಿಂಗಯ್ಯ, ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಮರ್ಲೆ ಅಣ್ಣಯ್ಯ, ಅಂಗಡಿ ಚಂದ್ರು, ಕುರುವಂಗಿ ವೆಂಕಟೇಶ್, ರವೀಶ್ ಖ್ಯಾತನಬೀಡು, ಜವರಯ್ಯ, ರಾಜಗೋಪಾಲ್ ಇದ್ದರು‌.

ಮುಂದಿನ ವರ್ಷ ಒಟ್ಟಾಗಿ ಆಚರಿಸಿ: ಸ್ವಾಮೀಜಿ ಸಲಹೆ

‘ಭೀಮಾ ಕೊರಂಗಾವ್ ವಿಜಯೋತ್ಸವ ಜಿಲ್ಲೆಯಲ್ಲಿ ಎರಡು ಸಂಘಟನೆಗಳು ಪ್ರತ್ಯೇಕವಾಗಿ ಆಚರಿಸುತ್ತಿರುವುದು ಎಂಬುದು ಗಮನಕ್ಕೆ ಬಂದಿದೆ. ಮುಂದಿನ ವರ್ಷ ಎರಡು ಸಂಘಟನೆಗಳೂ ಒಟ್ಟಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಸಂಘಟನೆಗಳು ಒಡೆದು ಚೂರಾಗುವುದಲ್ಲ. ಒಡೆದ ಚೂರುಗಳಿಂದ ಗಟ್ಟಿಯಾದ ಮಡಕೆ ನಿರ್ಮಾಣ ಮಾಡಬೇಕು. ಸಂಘಟನೆ ಗಟ್ಟಿಯಾಗಿದ್ದರೆ ಶಕ್ತಿ ಬರುತ್ತದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು. ಹೋರಾಟಗಾರರು ಸಂಘಟನೆಯನ್ನು ಸರಿಯಾಗಿ ಮುನ್ನಡೆಸದ ಕಾರಣ ಬೇರೆಯವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಹೋರಾಟದ ಮನೋಭಾವ ಬೆಳಸಬೇಕು. ಸಂಘಟನೆ ಕುಸಿಯದಂತೆ ನೋಡಿಕೊಳ್ಳಬೇಕು ಎಂದರು.

ಈ ರೀತಿಯ ಕಾರ್ಯಕ್ರಮಗಳಲ್ಲಿ ಡಿ.ಜೆಗಳಿಗಿಂತ ಜಾನಪದ ಕಲೆಗಳಿಗೆ ಆದ್ಯತೆ ನೀಡಿದರೆ ಕಲೆ ಬೆಳಸಬಹುದು. ಈ ಬಗ್ಗೆಯೂ ಯೋಚಿಸಿ ಎಂದು ಸಲಹೆ ನೀಡಿದರು.

ಮೆರವಣಿಗೆಯಲ್ಲಿ ಡಿ.ಜೆ ಸದ್ದಿಗೆ ಮಹಿಳೆಯರು ಕುಣಿದು ಕುಪ್ಪಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.