ADVERTISEMENT

ಬಾಗಿನ ಸಮರ್ಪಣೆ, ತೆಪ್ಪೋತ್ಸವ

2 ದಶಕದ ಬಳಿಕ ಕೋಡಿ ಹರಿದ ಕೀರನಕಟ್ಟೆ ಕೆರೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:24 IST
Last Updated 4 ಡಿಸೆಂಬರ್ 2021, 2:24 IST
ಬೀರೂರು ಸಮೀಪದ ಕೀರನಕಟ್ಟೆ ಕೆರೆಯಲ್ಲಿ ಶುಕ್ರವಾರ ಬಸವೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿಯ ತೆಪ್ಪೋತ್ಸವ ನಡೆಯಿತು.
ಬೀರೂರು ಸಮೀಪದ ಕೀರನಕಟ್ಟೆ ಕೆರೆಯಲ್ಲಿ ಶುಕ್ರವಾರ ಬಸವೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿಯ ತೆಪ್ಪೋತ್ಸವ ನಡೆಯಿತು.   

ಬೀರೂರು: ಸಮೀಪದ ಜೋಡಿ ತಿಮ್ಮಾಪುರ ಗ್ರಾಮದ ಕೀರನಕಟ್ಟೆ ಕೆರೆ 2 ದಶಕಗಳ ಬಳಿಕ ಮೈದುಂಬಿ ಹರಿದಿದ್ದು, ಶುಕ್ರವಾರ ಬಾಗಿನ ಸಮರ್ಪಣೆ ಮತ್ತು ಬಸವೇಶ್ವರ ಸ್ವಾಮಿ, ಆಂಜನೇಯ ಸ್ವಾಮಿಯವರ ತೆಪ್ಪೋತ್ಸವ ಭಕ್ತರ ಸಮ್ಮುಖದಲ್ಲಿ ನಡೆಯಿತು.

ತೆಪ್ಪೋತ್ಸವದ ಪ್ರಯುಕ್ತ ಮುಂಜಾನೆಯೇ ದೇವತೆಗಳನ್ನು ಅಡ್ಡಣಿಕೆಯಲ್ಲಿ ವಾದ್ಯಮೇಳದೊಂದಿಗೆ ಕೆರೆಯ ಕೋಡಿ ಬಳಿಗೆ ಕರೆತಂದು, ತೋರಣಗಳಿಂದ ನಿರ್ಮಿಸಿದ ಚಪ್ಪರ ದಲ್ಲಿರಿಸಿ ರುದ್ರಾಭಿಷೇಕ, ಪುಷ್ಪಾ ಲಂಕಾರ, ಅರ್ಚನೆಯನ್ನು ಅರ್ಚಕರಾದ ಚಂದ್ರಶೇಖರಯ್ಯ, ಮೂರ್ತಪ್ಪ ಮತ್ತು ಮಧುಸೂದನ್ ನಡೆಸಿದರು.

ನಂತರ ಸುಮಂಗಲಿಯರು ತುಂಬಿದಕೆರೆಗೆ ಬಾಗಿನ ಅರ್ಪಿಸಿದರು. ಬಳಿಕ ಎರಡೂ ದೇವತೆಗಳ ಉತ್ಸವ ಮೂರ್ತಿಗಳನ್ನು ತೆಪ್ಪದ ಮೇಲೆ ಪ್ರತಿಷ್ಠಾಪಿಸಿ ಒಂದು ದಡದಿಂದ ಮತ್ತೊಂದು ದಡದವರೆಗೂ ಕೊಂಡೊಯ್ಯಲಾಯಿತು.

ADVERTISEMENT

ಧಾರ್ಮಿಕ ಕಾರ್ಯಕ್ರಮದ ಕುರಿತು ಮಾತನಾಡಿದ ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಚಂದ್ರಪ್ಪ, ‘ಈ ಬಾರಿಯ ಮಳೆಯಿಂದ ಕೆರೆ ಕೋಡಿ ಬಿದ್ದಿರುವುದು ಕೃಷಿಕರಲ್ಲಿ ನೆಮ್ಮದಿ ತಂದಿದೆ. ಅದರ ಸಲುವಾಗಿ ವಿಶೇಷತೆಯನ್ನು ಮೆರೆಯಲು ಸುತ್ತಮುತ್ತಲ 7 ಗ್ರಾಮದ ಜನತೆ ತೀರ್ಮಾನಿಸಿ ಗ್ರಾಮದ ದೇವರಿಗೆ ಈ ಬಾರಿ ತೆಪ್ಪೋತ್ಸವವನ್ನು ಮಾಡಲು ನಿರ್ಧರಿಸಿ ಪ್ರಥಮ ಬಾರಿಗೆ ಈ ತೆಪ್ಪೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿರುವುದು ಕೂಡ ಸಂತಸ ತಂದಿದೆ’ ಎಂದರು.

ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ವೆಂಕಟೇಶ್, ಬಸಮ್ಮ, ಶಾಂತಮ್ಮ, ಗೋವಿಂದಪ್ಪ, ಆನಂದ್, ಕುಮಾರಸ್ವಾಮಿ ಮತ್ತು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಬಸವರಾಜ್ ಹಾಗೂ ದೇವಸ್ಥಾನದ ಗೌಡರು, ಗ್ರಾಮಸ್ಥರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.