ಬೀರೂರು: ಹೊಗರೇಹಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಲಕ್ಷ್ಮೀರಂಗನಾಥ ಸ್ವಾಮಿಯವರ ರಥೋತ್ಸವ ಬುಧವಾರ ಮಧ್ಯಾಹ್ನ ನೆರವೇರಿತು.
ಮಂಗಳವಾರ ಬೆಳಿಗ್ಗೆ ಸ್ವಸ್ತಿವಾಚನ, ದೇವತಾರಾಧನೆ, ನಿತ್ಯಹೋಮ, ಬಲಿಪ್ರದಾನ, ವೈಭವೋತ್ಸವ ಮತ್ತು ಲಕ್ಷ್ಮೀರಂಗನಾಥಸ್ವಾಮಿಯವರ ಕಲ್ಯಾಣೋತ್ಸವ, ಗಜವಾಹನೋತ್ಸವ ನೆರವೇರಿತು. ಬುಧವಾರವೂ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ ರಜತ ನಾಣ್ಯಗಳಿಂದ ಅಭಿಷೇಕ ನಡೆಸಲಾಯಿತು. ಬಳಿಕ ಅಲಂಕೃತ ಶ್ರೀದೇವಿ, ಭೂದೇವಿ ಸಹಿತ ಸ್ವಾಮಿಯ ಉತ್ಸವಮೂರ್ತಿಗಳನ್ನು ರಥಾರೋಹಣಕ್ಕಾಗಿ ಮಂಟಪಕ್ಕೆ ಕರೆತಂದು ಅಲ್ಲಿ ಮಂಟಪಡಿ ಸೇವೆ, ಶ್ರೀಕೃಷ್ಣ ಗಂಧೋತ್ಸವ, ರಥಾರೋಹಣ ನಡೆಸಲಾಯಿತು.
ಶಿವಮೊಗ್ಗದ ಶ್ರೀನಿವಾಸ್ ಎಂಬುವರು ₹1.50 ಲಕ್ಷಗಳಿಗೆ ಬಾವುಟ ಬಿಡ್‌ಮಾಡಿ ಪಡೆದು ಮೊದಲ ಪೂಜೆ ಸಲ್ಲಿಸುವ ಗೌರವ ಪಡೆದರು. ಬಳಿಕ, ರಥದಲ್ಲಿದ್ದ ಸ್ವಾಮಿಗೆ ಮಹಾಮಂಗಳಾರತಿ ನಡೆಸಿ, ಕದಳಿಚ್ಛೇದನದ ನಂತರ ಮೀಸಲು ಮತ್ತು ಒಕ್ಕಲಿನ ಗ್ರಾಮಗಳ ಭಕ್ತರಿಗೆ ತೆಂಗಿನಕಾಯಿ ನೀಡಿ ರಥದ ಚಕ್ರಕ್ಕೆ ಸಮರ್ಪಿಸುವಂತೆ ಸೂಚಿಸಲಾಯಿತು.
ಬಿರುದು ಬಾವಲಿಗಳ ನಡುವೆ ಭಕ್ತರು ವಾದ್ಯಮೇಳಗಳ ಹಿಮ್ಮೇಳದಲ್ಲಿ ಲಕ್ಷ್ಮೀರಂಗನಾಥಸ್ವಾಮಿ ಪಾದಕ್ಕೆ ಗೋವಿಂದ.... ಗೋವಿಂದಾ ಎಂದು ರಥವನ್ನು ಎಳೆದರು. ರಥದಲ್ಲಿದ್ದ ಸ್ವಾಮಿಗೆ ಮಂಗಳಾರತಿ ಅರ್ಪಿಸಿದ ಭಕ್ತರು ಹಣ್ಣು, ಕಾಯಿ ಮಾಡಿಸಿದರೆ, ಹರಕೆ ಹೊತ್ತವರು ರಥದ ಕಲಶಕ್ಕೆ ಬಾಳೆಹಣ್ಣು, ದವನಗಳನ್ನು ಎಸೆದು ಪ್ರಾರ್ಥಿಸಿದರು. ಸಿದ್ದೇಶ್ವರ ಸ್ವಾಮಿ ಸಮಿತಿ ವತಿಯಿಂದ ಭಕ್ತರಿಗೆ ಪಾನಕ-ಪನಿವಾರ ವಿತರಿಸಿದರೆ, ದೇವಾಲಯ ಸಮಿತಿಯು ಅನ್ನಸಂತರ್ಪಣೆ ಏರ್ಪಡಿಸಿತ್ತು.
ಇದೇ ಸಂದರ್ಭದಲ್ಲಿ ರಥದ ಚಕ್ರಗಳು ಶಿಥಿಲಗೊಂಡಿದ್ದು ಭಕ್ತರು ನೆರವು ನೀಡಬೇಕು ಎಂಬ ಕೋರಿಕೆಗೆ ರಥೋತ್ಸವಕ್ಕೆ ಬಂದಿದ್ದ ಶಾಸಕ ಕೆ.ಎಸ್.ಆನಂದ್ ₹5ಲಕ್ಷ ನೆರವು ನೀಡುವುದಾಗಿ ಘೋಷಿಸಿದರು. ಸಾಯಂಕಾಲ ರಥಾವರೋಹಣ, ಶೇಷ ವಾಹನೋತ್ಸವ, ಶಯನೋತ್ಸವ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಭಾನುವಾರದವರೆಗೂ ವಿವಿಧ ಕಾರ್ಯಕ್ರಮಗಳ ಬಳಿಕ ರಥೋತ್ಸವಕ್ಕೆ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.