
ಸಾವು (ಪ್ರಾತಿನಿಧಿಕ ಚಿತ್ರ)
ಬೀರೂರು(ಕಡೂರು): ಕಡೂರು ತಾಲ್ಲೂಕು ಅಂತರಘಟ್ಟೆಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ಪ್ರಯಾಣಿಕರನ್ನು ಕರೆದುಕೊಂಡು ತೆರಳುತ್ತಿದ್ದ ಆಟೊ ಮಗುಚಿ ಬಿದ್ದು, ಚಾಲಕ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ಬೀರೂರು ಹೊರವಲಯದ ದೋಗೆಹಳ್ಳಿ ಬಳಿ ನಡೆದಿದೆ.
ಬೀರೂರಿನ ಆಟೊ ಚಾಲಕ ಶಿವು (45) ಮೃತಪಟ್ಟವರು. ಬೀರೂರು-ಅಜ್ಜಂಪುರ ರಸ್ತೆಯಲ್ಲಿ ದೋಗೆಹಳ್ಳಿಯಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಆಟೊಗೆ ನಾಯಿಯೊಂದು ಅಡ್ಡಬಂದಿತ್ತು, ಅದನ್ನು ತಪ್ಪಿಸಲು ಯತ್ನಿಸಿದಾಗ ಆಟೊ ರಸ್ತೆ ಬದಿಯ ಕೊರಕಲಿಗೆ ಉರುಳಿದೆ.
ತೀವ್ರವಾಗಿ ಗಾಯಗೊಂಡ ಶಿವು ಅವರನ್ನು ಆಟೊದ ಹಿಂದೆಯೇ ಬೈಕ್‌ನಲ್ಲಿ ಬರುತ್ತಿದ್ದ ಸಹೋದರ ಶ್ರೀನಿವಾಸ್ ಮತ್ತು ಸಂಬಂಧಿಕ ಪ್ರೇಮ್‌ಕುಮಾರ್ ಅವರು ಆಂಬುಲೆನ್ಸ್ ಮೂಲಕ ಬೀರೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆಟೊದಲ್ಲಿದ್ದ ಭದ್ರಾವತಿಯ ಹನುಮಂತರಾವ್, ಪಲ್ಲವಿ, ಪ್ರಮೀಳಾಬಾಯಿ, ಬೀರೂರಿನ ವರುಣ್ ಮತ್ತು ಧನ್ಯಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.