ADVERTISEMENT

ನೂರಾರು ಮಂದಿಯಿಂದ ದೂರು; ತನಿಖೆ ಚುರುಕು

‘ಐ ಕಾಯಿನ್‌’, ‘ಬಿಟ್‌ ಕಾಯಿನ್‌’ಗೆ ಹಣ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 15:40 IST
Last Updated 23 ಜೂನ್ 2019, 15:40 IST

ಚಿಕ್ಕಮಗಳೂರು: ‘ಐ ಕಾಯಿನ್‌’, ‘ಬಿಟ್‌ ಕಾಯಿನ್‌’ ಚೈನ್‌ಲಿಂಕ್‌ ಕಂಪೆನಿಗೆ ಆನ್‌ಲೈನ್‌ನಲ್ಲಿ ಹಣ ಹೂಡಿ ಮೋಸ ಹೋಗಿರುವ ನೂರಾರು ಮಂದಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ವಂಚನೆ ಜಾಲದ ಜಾಡು ಪತ್ತೆ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮಾಜಿ ಶಾಸಕ ದಿವಂಗತ ಸಿಎಂಎಸ್‌ ಶಾಸ್ತ್ರಿ ಅವರ ಮೊಮ್ಮಗಳು ಸಿಂಧೂರಾ ಅವರು ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಹಣ ದ್ವಿಗುಣವಾಗುವುದಾಗಿ ಯಾರೊ ಹೇಳಿದ್ದಾರೆ. ಅದನ್ನೇ ನಂಬಿಕೊಂಡು ನಮ್ಮ ಅತ್ತೆಯವರು ಮಗಳು ಸಿಂಧೂರಾ ಹೆಸರಿನಲ್ಲಿ ಹಣ ಹಾಕಿದ್ದರು. ಹಣ ವಾಪಸ್‌ ಬರುವ ನಂಬಿಕೆ ಇಲ್ಲ. ಠಾಣೆಯಲ್ಲಿ ದೂರು ನೀಡಿದ್ದೇವೆ’ ಎಂದು ಸಿಂಧೂರಾ ಪತಿ ನವೀನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಗರದ ಉಪ್ಪಳ್ಳಿ, ಗೌರಿಕಾಲುವೆ, ವಿಜಯಪುರ, ಟಿಪ್ಪುನಗರ ಸಹಿತ ವಿವಿಧೆಡೆ, ಅಲ್ಲಂಪುರ, ಮಲ್ಲಂದೂರು, ಮಲ್ಲೇನಹಳ್ಳಿ ಬಹಳಷ್ಟು ಮಂದಿ ಹಣ ಹೂಡಿದ್ದಾರೆ. ಜಿಲ್ಲೆಯ ಕಡೂರು, ಮೂಡಿಗೆರೆ, ಎನ್.ಆರ್‌.ಪುರ, ಹಾಸನ ಜಿಲ್ಲೆಯ ಬೇಲೂರು ಇತರೆಡೆಯವರು ಹಣ ಹೂಡಿದ್ದಾರೆ. ವಿವಿಧೆಡೆಗಳವರು ಠಾಣೆಯಲ್ಲಿ ಶನಿವಾರ, ಭಾನುವಾರ ದೂರು ನೀಡಿದ್ದಾರೆ.

‘ಮಲ್ಲಂದೂರಿನ ವ್ಯಕ್ತಿಯೊಬ್ಬ ಹೇಳಿದ್ದನ್ನು ನಂಬಿ ಮೋಸ ಹೋದೆ. ತಾಯಿಯ ಸರವನ್ನು ₹ 1 ಲಕ್ಷಕ್ಕೆ ಅಡವಿಟ್ಟು ಹಣ ತಂದಿದ್ದೆ. ₹ 77 ಸಾವಿರವನ್ನು ಆತನ ಕೈಗೆ ಕೊಟ್ಟಿದ್ದೆ. ಮೊಬೈಲ್‌ಗೆ ಸಂದೇಶವೊಂದು ಬಂದಿತ್ತು. ಅದರಲ್ಲಿ ಡಾಲರ್‌ ಮಾಹಿತಿ ಇತ್ತು. ಮನೆ ಕಟ್ಟಿಸುವ ಯೋಚನೆ ಇತ್ತು. ಹಣಕ್ಕೆ ಪಂಗನಾಮ ಹಾಕಿದ್ದಾರೆ’ ಎಂದು ಮಲ್ಲೇನಹಳ್ಳಿ ಗ್ರಾಮಸ್ಥರೊಬ್ಬರು ಠಾಣೆಯಲ್ಲಿ ಅಲವತ್ತುಕೊಂಡರು.

‘ಈ ಯೋಜನೆಗೆ ಹಣ ತೊಡಗಿಸುವಂತೆ ಏಜೆಂಟ್‌ವೊಬ್ಬ ಪುಸಲಾಯಿಸಿದ್ದ ಹೂಡಿಕೆ ಮಾಡಿಸಿದ. ₹ 35 ಸಾವಿರ ತೊಡಗಿಸಿದರೆ ಎರಡು ತಿಂಗಳಲ್ಲಿ ಹಣ ದ್ವಿಗುಣ ವಾಗುತ್ತದೆ, 200 ದಿನಗಳಲ್ಲಿ ₹ 4 ಲಕ್ಷ ಸಿಗುತ್ತದೆ ಎಂದು ನಂಬಿಸಿದ್ದ. ₹ 1.40 ಲಕ್ಷ ಹಾಕಿದ್ದೆ. ಎಲ್ಲ ಹೋಯ್ತು’ ಎಂದು ನಗರ ಮುಸ್ಲಿಂ ಮಹಿಳೆಯೊರು ಗೋಳಿಟ್ಟರು.

ಈ ಯೋಜನೆಯಲ್ಲಿ ಹಣ ಹೂಡಿರುವವರ ಪೈಕಿ ಮುಸ್ಲಿಮರು ಜಾಸ್ತಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್‌ಲೇನ್‌ ರಸ್ತೆಯ ಪೆನ್ಷನ್‌ ಮೊಹಲ್ಲಾದ ರುಕ್ಷಿಂದಬಾನು ಅವರನ್ನು ಈಚೆಗೆ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್‌ ಈ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

‘ಸುಮಾರು ಒಂದು ವರ್ಷದಿಂದ ಈ ಯೋಜನೆ ದಂಧೆ ನಡೆದಿದೆ. ಏಜೆಂಟ್‌ಗಳು ನಂಬಿಸಿ ಹಣ ತೊಡಗಿಸುವಂತೆ ಪುಸಲಾಯಿಸಿದ್ದಾರೆ. ಆನ್‌ಲೈನ್‌ನಲ್ಲಿ ಖಾತೆಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ. ಶುರುವಿನಲ್ಲಿ ಕೆಲವರು ಹಣ ಮಾಡಿಕೊಂಡಿದ್ದಾರೆ. ಜಾಲ ವ್ಯಾಪಿಸಿದೆ. ಹೆಚ್ಚು ಹಣ ಕ್ರೋಢೀಕರಣವಾದಾಗ ವೆಬ್‌ಸೈಟ್‌ ಬಂದ್‌ ಮಾಡಿ ವಂಚಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ದೂರುಗಳು ದಾಖಲಾಗಿವೆ. ರುಕ್ಷಿಂದಬಾನು ಜೊತೆಗೆ ಯಾರ್ಯಾರು ಶಾಮೀಲಾಗಿದ್ದರು ಎಂಬ ನಿಟ್ಟಿನಲ್ಲಿ ಶೋಧ ನಡೆಯುತ್ತಿದೆ. ಕೆಲ ಮಾಹಿಗಳನ್ನು ಕಲೆ ಹಾಕಿದ್ದೇವೆ. ಶೀಘ್ರದಲ್ಲಿ ಎಲ್ಲರನ್ನು ಪತ್ತೆ ಹೆಚ್ಚುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.