ADVERTISEMENT

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ 300, ಈಡೇರಿಸಿರುವುದು 9: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 16:30 IST
Last Updated 10 ಸೆಪ್ಟೆಂಬರ್ 2022, 16:30 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಚಿಕ್ಕಮಗಳೂರು: ‘2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಪ್ರಣಾಳಿಕೆಯಲ್ಲಿ 300 ಭರವಸೆಗಳನ್ನು ನೀಡಿತ್ತು, ಅವುಗಳಲ್ಲಿ ಕೇವಲ ಒಂಬತ್ತನ್ನು ಈಡೇರಿಸಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಇಲ್ಲಿ ಶನಿವಾರ ಟೀಕಿಸಿದರು.

‘2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ 168 ಭರವಸೆ ನೀಡಿತ್ತು, ಅವುಗಳಲ್ಲಿ 159 ಈಡೇರಿಸಿದೆ. ಈಗಿನ ಬಿಜೆಪಿ ಸರ್ಕಾರದ ವೈಫಲ್ಯಗಳು, ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಬ್ಲಾಕ್‌ ಹಂತದಲ್ಲಿ ಪ್ರತಿ ಮನೆಮನೆಗೆ ಭೇಟಿ ನೀಡಿ ಜನರಿಗೆ ತಿಳಿಸುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿಯವರಿಗೆ ಸಂವಿಧಾನ, ರಾಷ್ಟ್ರಧ್ವಜದ ಬಗ್ಗೆ ಗೌರವ ಇಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಬಿಜೆಪಿಯ ಹೃದಯ ಮತ್ತು ಮೆಮಿದಳು. ತ್ರಿವರ್ಣ ಧ್ವಜವನ್ನು ಅವರು ಒಪ್ಪಿಕೊಂಡಿರಲಿಲ್ಲ, ಅದರಲ್ಲಿ ಮೂರು ಬಣ್ಣಗಳಿವೆ ಅಪಶಕುನ ಎಂದು ಜರಿದಿದ್ದರು. ನಾಗ್ಪುರದ ಆರ್‌ಎಸ್‌ಎಸ್‌ ಕಚೇರಿಯಲ್ಲಿ 52 ವರ್ಷ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಇಂಥವರು ದೇಶ, ರಾಷ್ಟ್ರೀಯತೆ ಬಗ್ಗೆ ಕಾಂಗ್ರೆಸ್‌ಗೆ ನೀತಿ ಪಾಠ ಹೇಳಲು ಮುಂದಾಗಿದ್ದಾರೆ’ ಎಂದು ಹೀಗಳೆದರು.

ADVERTISEMENT

ಜಿಲ್ಲೆಯಲ್ಲಿ 5 ವರ್ಷಗಳಿಂದ ಅಧಿಕ ಮಳೆಯಾಗಿ ಭೂಕುಸಿತ, ಬೆಳೆ ನಾಶ, ರಸ್ತೆ, ಮನೆ ಹಾನಿ ಸಂಭವಿಸಿವೆ. ಹಾನಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. 12ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಮಳೆ ಹಾನಿ ವಿಚಾರ ಪ್ರಸ್ತಾಪಿಸುತ್ತೇವೆ’ ಎಂದರು.
‘ಹಿಜಾಬ್‌, ಹಲಾಲ್‌ ಮೊದಲಾದ ವಿವಾದಗಳನ್ನು ಹುಟ್ಟುಹಾಕಿದ್ದು, ಪಠ್ಯಪುಸ್ತಕಗಳಲ್ಲಿ ಮಹನೀಯರ ಇತಿಹಾಸ ತಿರುಚಿದ್ದು, ಚಿತಾಗಾರ, ಅಕ್ಕಿ, ಗೋಧಿ, ಮೊಸರು, ಮಜ್ಜಿಗೆಗೂ ಜಿಎಸ್‌ಟಿ ವಿಧಿಸಿದ್ದು, ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರ ಹೆಚ್ಚಳ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.

‘ಕಾಮಗಾರಿ ಗುತ್ತಿಗೆಗೆ ಶೇ 40 ಕಮಿಷನ್‌ ದಂಧೆ ನಡೆಯುತ್ತಿದೆ ಎಂದು ರಾಜ್ಯದ ಕಂಟ್ರಾಕ್ಟರುಗಳ ಸಂಘದವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆರೋಪಕ್ಕೆ ಸಂಬಂಧಿಸಿದ ಸಚಿವರ ಮೇಲೆ ಏಕೆ ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯ (ಇಡಿ) ಕಾರ್ಯಾಚರಣೆ ಮಾಡಿಸಿಲ್ಲ. ದೂರಿನ ಕುರಿತು ಸಿಬಿಐ ತನಿಖೆ ಏಕೆ ಮಾಡಿಸಿಲ್ಲ’ ಎಂದು ಪ್ರಶ್ನಿಸಿದರು.

ಬಿಜೆಪಿಯವರು ನಾಥೂರಾಮ್‌ ಗೋಡ್ಸೆ ವಿವಾದಾತ್ಮಕ ವ್ಯಕ್ತಿಯ ವೈಭವೀಕರಣದಲ್ಲಿ ತೊಡಗಿದ್ದಾರೆ. ಶಿವಮೊಗ್ಗದಲ್ಲಿ ಗೋಡ್ಸೆ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಒಯ್ದದ್ದು ಸರಿಯಲ್ಲ. ಈ ನಡೆ ಹಿಂದೆ ರಾಜಕಾರಣ ಇದೆ ಎಂದು ಪ್ರತಿಕ್ರಿಯಿಸಿದರು.
‘ಜನರ ಮನಸ್ಸು ಒಂದು ಮಾಡಲು ಭಾರತ್‌ ಜೊಡೊ ಕಾರ್ಯಕ್ರಮ ಆಯೋಜಿಸಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 130ರಿಂದ 150 ರಿಂದ ಕ್ಷೇತ್ರಗಳಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌, ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿಶಾಂತೇಗೌಡ, ಪ್ಯಾನಲಿಸ್ಟ್‌ ರವೀಶ್‌ ಬಸಪ್ಪ, ವಕ್ತಾರ ಎಚ್‌.ಎಚ್‌.ದೇವರಾಜ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌, ಎಂ.ಎಲ್‌.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಡಾ.ಡಿ.ಎಲ್‌.ವಿಜಯಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.