ADVERTISEMENT

ದೇವರಿಗೆ ಹರಕೆ ಹೊತ್ತಿದ್ದೇನೆ, ತನಿಖೆ ಮುಗಿದ ಮೇಲೆ ತೀರಿಸ್ತೇನೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 15:52 IST
Last Updated 25 ಡಿಸೆಂಬರ್ 2024, 15:52 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಕಾನೂನಾತ್ಮಕ ಹೋರಾಟ ಮುಗಿದ ಬಳಿಕ ನಾನು ಧರ್ಮಸ್ಥಳಕ್ಕೆ ಹೋಗುತ್ತೇನೆ. ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗಿ ಹರಕೆ ತೀರಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

‘ಆಣೆ ಮಾಡಲು ಲಕ್ಷ್ಮೀ ಹೆಬ್ಬಾಳಕರ ಅವರು ಧರ್ಮಸ್ಥಳಕ್ಕೆ ಕರೆದಿದ್ದಾರೆ. ಪ್ರಕರಣ ಈಗ ತನಿಖಾ ಹಂತದಲ್ಲಿ ಇದೆ. ಎಲ್ಲವೂ ಮುಗಿದ ಬಳಿಕ ಹೋಗುತ್ತೇನೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರತಿಕ್ರಿಯಿಸಿದರು.

‘ನನ್ನನ್ನು ಬಂಧಿಸಿ ಇಡೀ ರಾತ್ರಿ ಸುತ್ತಾಡಿಸಿದಾಗ ವಾಹನ ಸವದತ್ತಿ ಯಲ್ಲಮ್ಮನ ದೇವಾಲಯದ ಎದುರೇ ಹಾದು ಹೋಯಿತು. ಆಗ ಹರಕೆ ಕಟ್ಟಿಕೊಂಡಿದ್ದೆ. ದೇವಿಯ ಬಳಿ ಏನು ಬೇಡಿಕೊಂಡಿದ್ದೇನೆ ಎಂಬುದನ್ನು ಹರಕೆ ತೀರಿಸುವ ದಿನವೇ ಹೇಳುತ್ತೇನೆ’ ಎಂದರು.

ADVERTISEMENT

‘ಖಾನಾಪುರ ಠಾಣೆ ಸಬ್ ಇನ್‌ಸ್ಪೆಕ್ಟರ್ ಅಮಾನತು ಬಗ್ಗೆ ಗೊತ್ತಿಲ್ಲ. ಪಿಎಸ್‌ಐ ಅಮಾನತು ಕ್ರಮದಿಂದ ಪ್ರಯೋಜನ ಇಲ್ಲ. ಅನುಮತಿ ಇಲ್ಲದಿದ್ದರೂ ನಾಲ್ಕು ಜಿಲ್ಲೆ ಸುತ್ತಾಡಿಸಿದ್ದಾರೆ. ಎನ್‌ಕೌಂಟರ್ ಅಥವಾ ಹಲ್ಲೆ ಮಾಡುವ ಉದ್ದೇಶದಿಂದ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ಅಲ್ಲಿನ ಎಸ್ಪಿ, ಪೊಲೀಸ್ ಕಮಿಷನರ್‌ ಮತ್ತು ಆಗಾಗ ನಿರ್ದೇಶನ ನೀಡುತ್ತಿದ್ದವರ ವಿರುದ್ಧ ಕ್ರಮ ಆಗಬೇಕು’ ಎಂದು ಒತ್ತಾಯಿಸಿದರು.

‘ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತ ಸಹಾಯಕ ಮತ್ತು ಸದ್ದಾಂ ಎಂಬ ವ್ಯಕ್ತಿ ನನ್ನ ಮೇಲೆ ದಾಳಿ ಮಾಡಿದರು. ಅಲ್ಲಿ ಅಧಿಕಾರೇತರ ಆಪ್ತ ಸಹಾಯಕರನ್ನು ನೇಮಿಸಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ‘ ಎಂದು ಹೇಳಿದರು.

‘ನೌಕರ ರುದ್ರೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಪಡೆಯಬೇಕಿತ್ತು. ಈಶ್ವರಪ್ಪ ವಿಷಯದಲ್ಲಿ ಸಿದ್ದರಾಮಯ್ಯ ಅವರೂ ರಾಜೀನಾಮೆಗೆ ಆಗ್ರಹಿಸಿದ್ದರು. ಆದರೆ, ಲಕ್ಷ್ಮೀ ಹೆಬ್ಬಾಳಕರ ಅವರ ವಿಷಯದಲ್ಲಿ ಮೌನ ವಹಿಸಿದರು. ಬೇರೊಬ್ಬರಿಗೆ ಮೋಹ ಇದೆ ಎಂದು ಭಾವಿಸಿದ್ದೆ. ಸಿದ್ದರಾಮಯ್ಯ ಅವರಿಗೆ ಯಾವಾಗ ಮೋಹ ಹುಟ್ಟಿಕೊಂಡಿತೊ ಗೊತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.