ADVERTISEMENT

ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಹಿಂಸೆ; ಅಂತರ್‌ಕಲಹ ಸನ್ನಿಹಿತ: ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 5:08 IST
Last Updated 5 ಜುಲೈ 2022, 5:08 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ಚಿಕ್ಕಮಗಳೂರು: ‘ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಹಿಂಸೆ ಸೃಷ್ಟಿಸುತ್ತಿದ್ದಾರೆ. ರಾಷ್ಟ್ರದಲ್ಲಿ ಅಂತರ್‌ ಕಲಹ ನಡೆಯುವುದರಲ್ಲಿ ಸಂಶಯ ಇಲ್ಲ’ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯ ಸಿದ್ಧಾಂತವನ್ನು ಎಲ್ಲ ಕಡೆ ಅನುಷ್ಠಾನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಉದಯಪುರ, ಅಮರಾವತಿಯಲ್ಲಿ ನಡೆದ ಪ್ರಕರಣಗಳು ಅದನ್ನು ಪುಷ್ಟೀಕರಿಸುತ್ತದೆ. ದೇಶದಲ್ಲಿ ಅಶಾಂತಿ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದೆ’ ಎಂದು ದೂರಿದರು.

‘ಭಾವನಾತ್ಮಕ ವಿಚಾರ ಮುಂದಿಟ್ಟು ಜನರನ್ನು ಜನರನ್ನು ತಟಸ್ಥಗೊಳಿಸುವ ಪ್ರಯತ್ನ ನಡೆಯುತ್ತಿದೆ. ಶೇ 20 ರಷ್ಟು ಇರುವ ಅಲ್ಪಸಂಖ್ಯಾತರಿಂದ ಶೇ 80ರಷ್ಟು ಇರುವ ಬಹುಸಂಖ್ಯಾತರಿಗೆ ಏನೋ ಆಗುತ್ತದೆ ಎಂಬ ‘ಬೆದರು ಗೊಂಬೆ’ ಸೃಷ್ಟಿಸುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಅಗ್ನಿಪಥ್‌ ಯೋಜನೆಯಲ್ಲಿ ಯುವಕರಿಗೆ ಭವಿಷ್ಯ ಇಲ್ಲ. ಯೋಜನೆಯಲ್ಲಿ ನೇಮಕವಾದವರು ನಾಲ್ಕು ವರ್ಷ ಮುಗಿಸಿ ನಿವೃತ್ತಿಯಾಗುತ್ತಾರೆ. ಅವರಿಗೆ ಪಿಂಚಣಿ ಸೌಲಭ್ಯವೂ ಇಲ್ಲ’ ಎಂದರು.

‘ಪ್ರಧಾನಿ ಮೋದಿ ಅವರು ಎಂಟು ವರ್ಷದಲ್ಲಿ 16 ಕೋಟಿ ಉದ್ಯೋಗ ನೀಡಬೇಕಿತ್ತು. 40 ಲಕ್ಷ ಉದ್ಯೋಗವನ್ನು ನೀಡಲು ಸಾಧ್ಯವಾಗಿಲ್ಲ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹಲವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ’ ಎಂದು ದೂರಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಇದ್ದವು. ಸರ್ಕಾರ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದೆ. ನಿರೀಕ್ಷೆಗಳೆಲ್ಲ ಹುಸಿಯಾಗಿವೆ’ ಎಂದರು.

3 ತಿಂಗಳು ಮುಂಚೆ ಟಿಕೆಟ್‌ ಘೋಷಣೆ: ‘ಈ ಬಾರಿ ಚುನಾವಣೆಗೆ ಮೂರು ತಿಂಗಳು ಇರುವಾಗಲೇ ಕಾಂಗ್ರೆಸ್‌ ಟಿಕೆಟ್‌ ಘೋಷಿಸಲು ನಿರ್ಧರಿಸಲಾಗಿದೆ. ಪಕ್ಷದಲ್ಲಿ ಮನಭೇದ ಇದೆ, ಸರಿಪಡಿಸಿಕೊಳ್ಳುತ್ತೇವೆ. ಪಕ್ಷದ ಜಿಲ್ಲಾ ಘಟಕದವರಲ್ಲಿ ಭಿನ್ನಾಭಿಪ್ರಾಯಗಳು ಇದ್ದರೆ, ಚರ್ಚಿಸಿ ಸರಿಪಡಿಸುತ್ತೇವೆ’ ಎಂದು ಉತ್ತರಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌, ಎಂ.ಸಿ.ಶಿವಾನಂದಸ್ವಾಮಿ, ಕೆ.ಮಹಮ್ಮದ್‌, ಷಫಿ, ಬಿ.ಎಸ್‌.ಮಹಮ್ಮದ್‌, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.