ADVERTISEMENT

ಬಿಹಾರ ಗೆಲುವು: ಬಿಜೆಪಿ ವಿಜಯೋತ್ಸವ

ಮುಖಂಡರು, ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:54 IST
Last Updated 15 ನವೆಂಬರ್ 2025, 5:54 IST
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಸಂಭ್ರಮಿಸಿದರು
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಸಂಭ್ರಮಿಸಿದರು   

ಚಿಕ್ಕಮಗಳೂರು: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ನಂತರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸಂಭ್ರಮಾಚರಣೆ ಮಾಡಿದರು.

ಜಿಲ್ಲಾ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು, ಪರಸ್ಪರ ಸಿಹಿ ಹಂಚಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ‘ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ವಿರೋಧ ಪಕ್ಷದ ಮುಖಂಡರು ಮತಗಳ್ಳತನದ ಆರೋಪ ಹೊರಿಸಿದರು. ಮತದಾರರಿಗೆ ಹಣದ ಆಮಿಷ ತೋರಿಸಿದರು. ಆದರೂ ಮತದಾರರು ಯಾವುದೇ ಆಮಿಷಕ್ಕೆ ಬಲಿಯಾಗದೆ ಎನ್‌ಡಿಎಗೆ ಸಂಪೂರ್ಣ ಬಹುಮತ ನೀಡಿದ್ದಾರೆ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಹಲವು ರಾಜ್ಯಗಳಲ್ಲಿ ಬಿಜೆಪಿ ನೂರಾರು ಗೆಲುವು ಸಾಧಿಸಿದೆ. ಆದರೆ, ರಾಹುಲ್‌ಗಾಂಧಿ ನೇತೃತ್ವದ ನಡೆದ ಚುನಾವಣೆಗಳಲ್ಲಿ ಸಂಪೂರ್ಣವಾಗಿ ಠೇವಣಿ ಕಳೆದುಕೊಂಡು ಸತತ ನೂರನೇ ಸೋಲಿಗೆ ಕಾರಣವಾಗಿದೆ’ ಎಂದು ಟೀಕಿಸಿದರು.

ಇವಿಎಂ ಹ್ಯಾಕ್, ಮತಗಳ್ಳತನ ಎಂಬ ಸುಳ್ಳು ಸುದ್ದಿ ಹರಡುವ ಮೂಲಕ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ವಿರೋಧ ಪಕ್ಷದ ನಾಯಕರಿಗೆ ಬಿಹಾರ ರಾಜ್ಯದ ಮತದಾರರು ತಕ್ಕಉತ್ತರ ನೀಡಿದ್ದಾರೆ. ಜನರ ಈ ತೀರ್ಪಿನ ನಂತರ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು ಎಂದರು.

ಬಿಹಾರ ಚುನಾವಣೆಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡ, ಗೃಹ ಸಚಿವ ಅಮತ್‌ ಶಾ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಮತದಾರರು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ, ‘ಕೇಂದ್ರದ ಮೋದಿ ಸರ್ಕಾರ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಸಾಧನೆಗಳೇ ಈ ಬಾರಿಯ ವಿಧಾನಸಭಾ ಚುನಾವಣೆ ಗೆಲುವಿಗೆ ಸಾಧ್ಯವಾಯಿತು’ ಎಂದು ಹೇಳಿದರು.

ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ‘ಎನ್‌ಡಿಎ ನೇತೃತ್ವದ ಪಕ್ಷ ದೇಶದ ಎಲ್ಲಾ ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕೆ ಅಂದಿನ ಸರ್ಕಾರದಲ್ಲಿ ನಡೆದ ದುರಾಡಳಿತವೇ ನೇರ ಕಾರಣ’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ನಾರಾಯಣಗೌಡ, ವಕ್ತಾರ ಪುಟ್ಟಸ್ವಾಮಿ, ಕಾರ್ಯದರ್ಶಿ ಅರುಣ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರ ಘಟಕದ ಅಧ್ಯಕ್ಷ ಜೀವನ್, ಮಾದ್ಯಮ ಪ್ರಮುಖ್ ದಿನೇಶ್, ಮುಖಂಡರಾದ ಹಂಪಯ್ಯ, ಕೌಶಿಕ್, ಎಚ್.ಕೆ.ಕೇಶವಮೂರ್ತಿ, ರೇವನಾಥ್, ಸೋಮಶೇಖರ್, ಸೀತರಾಮಭರಣ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.