ADVERTISEMENT

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಲಹೆ

ಬಾಳೆಹೊನ್ನೂರಿನಲ್ಲಿ ಬಿಲ್ಲವ ಸಮಾಜದಿಂದ ವಸತಿಗೃಹ, ನವೀಕೃತ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 16:55 IST
Last Updated 3 ಜನವರಿ 2021, 16:55 IST
ಬಾಳೆಹೊನ್ನೂರಿನ ಕಡ್ಲೆಮಕ್ಕಿಯಲ್ಲಿ ನಿರ್ಮಿಸಿದ್ದ ನೂತನ ವಸತಿಗೃಹ ಹಾಗೂ ನವೀಕೃತ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಿದರು. ಶಾಸಕ.ಟಿ.ಡಿ.ರಾಜೇಗೌಡ ಇದ್ದರು
ಬಾಳೆಹೊನ್ನೂರಿನ ಕಡ್ಲೆಮಕ್ಕಿಯಲ್ಲಿ ನಿರ್ಮಿಸಿದ್ದ ನೂತನ ವಸತಿಗೃಹ ಹಾಗೂ ನವೀಕೃತ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಿದರು. ಶಾಸಕ.ಟಿ.ಡಿ.ರಾಜೇಗೌಡ ಇದ್ದರು   

ಬಾಳೆಹೊನ್ನೂರು: ‘ಬಿಲ್ಲವ ಸಮು ದಾಯದ ಹಿಂದುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಘಟನೆಗಳು ಪ್ರಯತ್ನಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಕಡ್ಲೆಮಕ್ಕಿಯ ಬಿಲ್ಲವ ಸಮುದಾಯ ಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ, ನಾರಾಯಣಗುರು ಯುವ ವೇದಿಕೆ, ಬಿಲ್ಲವ ಮಹಿಳಾ ಘಟಕ ಆಯೋಜಿಸಿದ್ದ ನೂತನ ವಸತಿಗೃಹ ಹಾಗೂ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಧರ್ಮ ಕಾಪಾಡುವ ನೆಪದಲ್ಲಿ ಹಣೆಗೆ ಉದ್ದುದ್ದ ಕುಂಕುಮ ಇಟ್ಟುಕೊಂಡ ಅಮಾಯಕ ಯುವಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೈಲು ಸೇರುತ್ತಿದ್ದಾರೆ. ಇದು ಆಗಬಾರದು. ದೇಶದಲ್ಲಿ ಲಕ್ಷಾಂತರ ದೇವಸ್ಥಾನ, ಮಸೀದಿ, ಮಂದಿರಗಳಿವೆ. ಈಗಿನ ಅಗತ್ಯಕ್ಕೆ ಬೇಕಾಗಿರುವುದು ಸರಸ್ವತಿ ಮಂದಿರ. ಸಮುದಾಯದ ಎಲ್ಲರಿಗೂ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ದಾನಿಗಳ ನೆರವಿನಿಂದ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳನ್ನು ಆರಂಭಿಸುವ ಮೂಲಕ ಬಡವ ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಲು ಕೈ ಜೋಡಿಸಬೇಕು. ಸಂಘದ ಅಭಿವೃದ್ಧಿ ಗಾಗಿ ₹ 25 ಲಕ್ಷ ಅನುದಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಬಿಲ್ಲವ ಸಮಾಜ ಶ್ರಮಿಕ ವರ್ಗವಾಗಿದೆ. ಕೃಷಿ, ಉದ್ಯಮ, ನಾಟಿ ಔಷಧಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅವರದ್ದೇ ಆದ ಛಾಪು ಮೂಡಿಸಿದೆ. ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯ. ಸಂಘದ ಕಟ್ಟಡದ ಅಭಿವೃದ್ಧಿಗೆ ₹ 10 ಲಕ್ಷ ಅನುದಾನ ನೀಡುತ್ತೇನೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ. ಸತೀಶ್ ಮಾತನಾಡಿ, ‘ಕೋವಿಡ್‌ ಹಿನ್ನೆಲೆಯಲ್ಲಿ ಸಮಾಜ ಸಂಕಷ್ಟ ಎದುರಿಸುತ್ತಿದೆ. ಸಮುದಾಯ ಕ್ಕೊಂದು ನಿಗಮ ಸ್ಥಾಪಿಸುವ ನಿಟ್ಟಿನಲ್ಲಿ ಮುಖಂಡರು ಸಭೆ ಸೇರಿ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಕಟ್ಟಡ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ದಯಾನಂದ್ ಪೇಟೆಗದ್ದೆ, ಕೆ.ಜೆ.ಶ್ರೀನಿವಾಸ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೊಟ್ಯಾನ್, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಸಂಘದ ಗೌರವಾಧ್ಯಕ್ಷ ಸತೀಶ್ ಅರಳಿಕೊಪ್ಪ, ಭಾಸ್ಕರ್ ವೆನಿಲ್ಲಾ, ಚಂದ್ರ ಕೆ.ಕೊಟ್ಯಾನ್, ಯು.ಪಿ.ಮುದರ ಪೂಜಾರ್, ಪ್ರಭಾಕರ್ ಪ್ರಣಸ್ವಿ, ಅರುಣ್ ಜೆ.ಭಟ್, ಶೇಖರ್ ಇಟ್ಟಿಗೆ, ಎನ್.ಎ.ಸಂಜೀವ್, ಕೆ.ಜಿನ್ನಪ್ಪ, ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.