ಚಿಕ್ಕಮಗಳೂರು: ‘ಅಕ್ಷತೆ ಬೇಕಾ-ಗ್ಯಾರಂಟಿ ಬೇಕಾ ಎಂದು ಕೇಳುವ ಮೂಲಕ ಜನರನ್ನು ಕಾಂಗ್ರೆಸ್ ಪಕ್ಷ ಬ್ಲ್ಯಾಕ್‌ಮೇಲ್ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು’ ಎಂದರು.
‘ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್ ಸೆಟ್‌ಗೆ ವಿದ್ಯುತ್ ಇಲ್ಲ. ಇವರು ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ’ ಎಂದು ಲೇವಡಿ ಮಾಡಿದರು.
‘ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು, ಬಾಲರಾಮನ ಮೂರ್ತಿ ಪುನರ್ ಪ್ರತಿಷ್ಠಾಪನೆ ಬಳಿಕ ದೇಶದ ವಾತಾವರಣ ಬದಲಾಗಿದೆ. ಕಾಂಗ್ರೆಸ್ ನಾಯಕರು ಭಯಭೀತರಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ’ ಎಂದರು.
‘ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನಮಧ್ವಜ ಇಳಿಸಿದ ವಿಷಯದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವಂದ್ವದಲ್ಲಿದ್ದಾರೆ. ಯಾವುದೇ ತೀರ್ಮಾನ ಮಾಡಲಾಗುತ್ತಿಲ್ಲ. ಕಾಂಗ್ರೆಸ್ ದೇಶ- ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
ಹನುಮ ಧ್ವಜಕ್ಕೆ ಕಾಂಗ್ರೆಸ್ ವಿರೋಧಿಸುವುದು ನಾಚಿಕೆಗೇಡು. ರಾಮ ಭಕ್ತರು ರಾಜ್ಯ ಸರ್ಕಾರದ ದುಷ್ಟ ನಡವಳಿಕೆ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ–ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ ಗ್ಯಾರಂಟಿ ನಿಲ್ಲಲ್ಲ. ಕಳೆದ ಬಾರಿ ದೃಷ್ಟಿ ಬೊಟ್ಟಿನಂತೆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ ಅದನ್ನೂ ಕಳೆದುಕೊಳ್ಳಲಿದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದರು.
‘ಗ್ಯಾರಂಟಿಗಳಿಂದ ಸರ್ಕಾರ ಪಾಪರ್ ಆಗಲಿದೆ ಎಂದು ಸರ್ಕಾರದ ಆರ್ಥಿಕ ಸಲಹೆಗಾರಾದ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಅದೇ ರೀತಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ. ಅವರೆಲ್ಲರೂ ಸರಿಯಾಗಿಯೇ ಹೇಳಿದ್ದಾರೆ. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ’ ಎಂದರು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋದ ಕಡೆಯಲ್ಲೆಲ್ಲ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿದೆ. ಬಿಹಾರದಲ್ಲಿ ಈಗಾಗಲೇ ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅರವಿಂದ ಕೇಜ್ರಿವಾಲ್ ದೂರವಾಗಿದ್ದಾರೆ. ಎಲ್ಲ ಕಡೆ ‘ಇಲ್ಲ’ ಎಂಬ ಪ್ರತಿಕ್ರಿಯೆ ಬಂದಿದ್ದು ಕರ್ನಾಟಕದಲ್ಲೂ ಇಲ್ಲ ಎಂಬುದೇ ಗ್ಯಾರಂಟಿಯಾಗಲಿದೆ. ಆದ್ದರಿಂದ ‘ಕಾಂಗ್ರೆಸ್ ಗೆಲ್ಲಲ್ಲ ಗ್ಯಾರಂಟಿ ನಿಲ್ಲಲ್ಲ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.