ADVERTISEMENT

ಚಿಕ್ಕಮಗಳೂರು: ಓದುವ ಆಸಕ್ತಿ ಹೆಚ್ಚಿಸಲು ‘ಪುಸ್ತಕ ಗೂಡು’

ಜಿಲ್ಲಾ ಪಂಚಾಯಿತಿಯಿಂದ ಹೊಸ ಯೋಜನೆ

ವಿಜಯಕುಮಾರ್ ಎಸ್.ಕೆ.
Published 23 ಸೆಪ್ಟೆಂಬರ್ 2025, 5:18 IST
Last Updated 23 ಸೆಪ್ಟೆಂಬರ್ 2025, 5:18 IST
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ರೂಪಿಸಿರುವ ಪುಸ್ತಕ ಗೂಡು ಮಾದರಿಗಳು
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ರೂಪಿಸಿರುವ ಪುಸ್ತಕ ಗೂಡು ಮಾದರಿಗಳು   

ಚಿಕ್ಕಮಗಳೂರು: ಓದುವ ಸಂಸ್ಕೃತಿ ಹೆಚ್ಚಿಸಲು ಜಿಲ್ಲೆಯಲ್ಲಿ ‘ಪುಸ್ತಕ ಗೂಡು’ ಎಂಬ ವಿಶೇಷ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ರೂಪಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನನಿಬಿಡ ಪ್ರದೇಶಗಳಲ್ಲಿ ಪುಸ್ತಕಗಳ ಗೂಡು ತೆರೆಯಲು ಮುಂದಾಗಿದೆ.

ಪ್ರಮುಖ ವೃತ್ತ, ಮಾರುಕಟ್ಟೆ, ವೃತ್ತಗಳು, ಗ್ರಾಮ ಪಂಚಾಯಿತಿ ಕಚೇರಿ ಆವರಣ, ಬಸ್ ನಿಲ್ದಾಣ, ದೇವಸ್ಥಾನ, ಮಸೀದಿ, ಚರ್ಚ್‌ ಸೇರಿ ಜನ  ಸೇರುವ ಕಡೆಗಳಲ್ಲಿ ಈ ಪುಸ್ತಕ ಗೂಡುಗಳನ್ನು ತೆರೆಯಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ 100 ಕಡೆ ಪುಸ್ತಕ ಗೂಡುಗಳು ತೆರೆದುಕೊಳ್ಳಲಿವೆ.

ಮೊಬೈಲ್ ಫೋನ್ ನೋಡಿಕೊಂಡು ಕಾಲಹರಣ ಮಾಡುವ ಬದಲು ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಲು ಈ ಅವಕಾಶವನ್ನು ಜಿಲ್ಲಾ ಪಂಚಾಯಿತಿ ಕಲ್ಪಿಸುತ್ತಿದೆ. ಪುಸ್ತಕದ ಗೂಡಿನಲ್ಲಿ ಜಿಲ್ಲಾ ಪಂಚಾಯಿತಿ ಮೂಲಕವೇ ಪುಸ್ತಕಗಳನ್ನು ಇಡಲಾಗುತ್ತದೆ. ಬಿಡುವಿನ ಸಂದರ್ಭದಲ್ಲಿ ಪುಸ್ತಕಗಳ ಕಡೆ ಕಣ್ಣಾಡಿಸಿ ಅಗತ್ಯ ಎನಿಸಿದರೆ ತೆಗೆದುಕೊಂಡು ಹೋಗಬಹುದು. ಓದಿದ ಬಳಿಕ ವಾಪಸ್ ತಂದು ಇರಿಸಬೇಕು.

ADVERTISEMENT

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈಗಾಗಲೇ ಡಿಜಿಟಲ್ ಗ್ರಂಥಾಲಯಗಳಿವೆ. ಇದರ ಮುಂದುವರಿದ ಭಾಗವಾಗಿ ಪುಸ್ತಕದ ಗೂಡು ಪರಿಕಲ್ಪನೆ ರೂಪಿಸಿದೆ. ಯೂರೋಪ್ ದೇಶಗಳಲ್ಲಿ ಇರುವ ಮಾದರಿಯಲ್ಲಿ ಎಲ್ಲೆಂದರಲ್ಲಿ ಓದಗರಿಗೆ ಪುಸ್ತಕಗಳು ಸಿಗುವಂತೆ ಮಾಡಬೇಕು ಎಂಬುದು ಇದರ ಉದ್ದೇಶ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

ಕಥೆ, ಕಾದಂಬರಿ, ಕವಿತೆಗಳು, ವಾರ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲ ಆಗುವ ಪುಸ್ತಕಗಳು ಇಲ್ಲಿ ಇರಲಿವೆ. ಪುಸ್ತಕ ಗೂಡುಗಳ ಪುಸ್ತಕಗಳನ್ನು ತೆಗೆದುಕೊಂಡು ಹೋಗುವುದಷ್ಟೇ ಅಲ್ಲ, ತಮ್ಮ ಬಳಿ ಇರುವ ಪುಸ್ತಕಗಳನ್ನು ತಂದಿಡಲು ಕೂಡ ಅವಕಾಶ ಇದೆ. ಪುಸ್ತಕಗಳನ್ನು ತೆಗೆದುಕೊಂಡು ಹೋಗುವವರು ವಾಪಸ್ ತಂದಿಡುವುದಿಲ್ಲ ಎಂಬ ಮಾತುಗಳಿವೆ. ವಾಪಸ್ ತಂದಿಡದಿದ್ದರೆ ಮತ್ತಷ್ಟು ಪುಸ್ತಕಗಳನ್ನು ಜಿಲ್ಲಾ ಪಂಚಾಯಿತಿ ಪೂರೈಸಲಿದೆ ಎಂದು ಅವರು ವಿವರಿಸಿದರು.

‘ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಸಂಘ–ಸಂಸ್ಥೆಗಳು ಪುಸ್ತಕ ಗೂಡು ನಿರ್ಮಿಸಲು ಮುಂದೆ ಬಂದರೂ ಮಾದರಿಯನ್ನು ನೀಡಲಾಗುವುದು. ಒಟ್ಟಾರೆ ಓದುವ ಅಭಿರುಚಿ ಹೆಚ್ಚಿಸುವುದಷ್ಟೇ ನಮ್ಮ ಉದ್ದೇಶ’ ಎಂದು ತಿಳಿಸಿದರು.

ಜನಪ್ರತಿನಿಧಿಗಳ ಸಹಕಾರಕ್ಕೆ ಆಲೋಚನೆ

ಪುಸ್ತಕ ಗೂಡುಗಳು ಹೇಗಿರಬೇಕು ಎಂಬ ಮಾದರಿಯನ್ನು ಜಿಲ್ಲಾ ಪಂಚಾಯಿತಿ ರೂಪಿಸಿದೆ. ಶಾಸಕರು ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ಅನುದಾನ ಪಡೆಯಲು ಅಧಿಕಾರಿಗಳು ಆಲೋಚಿಸಿದ್ದಾರೆ. ಜನನಿಬಿಡ ಪ್ರದೇಶಗಳನ್ನೂ ಗುರುತಿಸಲಾಗಿದ್ದು ಅವುಗಳ ಪಟ್ಟಿಯನ್ನು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ನೀಡಲಾಗುತ್ತಿದೆ. ಅವರ ಅನುದಾನದಲ್ಲಿ ಆ ಜಾಗಗಳಲ್ಲಿ ಪುಸ್ತಕ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಜನಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.

ಪುಸ್ತಕ ಗೂಡುಗಳ ನಿರ್ಮಾಣಕ್ಕೆ ಸಹಕಾರ ನೀಡಲು ಜನಪ್ರತಿನಿಧಿಗಳು ಒಪ್ಪಿದ್ದಾರೆ. ಜಿಲ್ಲಾ ಪಂಚಾಯಿತಿ ಪುಸ್ತಕಗಳನ್ನು ಪೂರೈಸಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೀಘ್ರವೇ ಪುಸ್ತಕ ಗೂಡು ನಿರ್ಮಾಣವಾಗಲಿವೆ.
–ಎಚ್.ಎಸ್.ಕೀರ್ತನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.