
ಕಡೂರು: ರಾಜಸ್ಥಾನದ ಬಿಕಾನೇರ್‌ನಲ್ಲಿ ಗಡಿಭದ್ರತಾ ಪಡೆಯ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕಿನ ಜೋಡಿತಿಮ್ಮಾಪುರದ ಗಿರೀಶ್ (37) ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ಸೇವಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಕಳೆದ 18 ವರ್ಷಗಳಿಂದ ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಶ್ರೀನಗರ, ಭೋಪಾಲ್, ಗುವಾಹಟಿ ಮತ್ತು ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು.
ಸೋಮವಾರ (ಡಿ.8) ಸಂಜೆ ಕರ್ತವ್ಯದಲ್ಲಿರುವಾಗ ವಾಂತಿಯಾದ ಕಾರಣ ವಿಶ್ರಾಂತಿಗೆ ತೆರಳಿದ್ದರು. ಬಳಿಕ, ರಾತ್ರಿ ಕುಟುಂಬಸ್ಥರೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡಿ, ‘ಏನೂ ಸಮಸ್ಯೆ ಇಲ್ಲ ಆರೋಗ್ಯವಾಗಿದ್ದೇನೆ. ಬೆಳಿಗ್ಗೆ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸುವೆ’ ಎಂದು ಮಾಹಿತಿ ನೀಡಿದ್ದರು.
ಆದರೆ, ಮಂಗಳವಾರ ಬೆಳಿಗ್ಗೆ ಬಿಎಸ್‌ಎಫ್ ಯುನಿಟ್‌ನವರು ಕುಟುಂಬದವರಿಗೆ ಕರೆ ಮಾಡಿ ಗಿರೀಶ್ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದು, ಕುಟುಂಬಸ್ಥರು ಇಲ್ಲಿಗೆ ಬರುವುದು ಬೇಡ, ಇಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ಬೆಂಗಳೂರಿಗೆ ಮೃತದೇಹವನ್ನು ಕಳಿಸಲಾಗುವುದು. ಅಲ್ಲಿಂದ ಬುಧವಾರ ಬೆಳಿಗ್ಗೆ ಆಂಬುಲೆನ್ಸ್ ಮೂಲಕ ಸ್ವಗ್ರಾಮ ಜೋಡಿತಿಮ್ಮಾಪುರಕ್ಕೆ ಮೃತದೇಹ ತರುವುದಾಗಿ ತಿಳಿಸಿದ್ದಾರೆ. ಅವರ ಸಾವಿಗೆ ಕಾರಣ ಈವರೆಗೆ ಖಚಿತವಾಗಿಲ್ಲ. ನಮ್ಮ ತೋಟದಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಮೃತರ ಸಹೋದರ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅವರಿಗೆ ಪತ್ನಿ ಎಚ್.ಜಿ.ಅಭಿಲಾಷ, 9 ವರ್ಷದ ಪುತ್ರ, 6 ವರ್ಷದ ಪುತ್ರಿ, ತಂದೆ ದೂಸಯ್ಯನ ಬಸಪ್ಪ, ತಾಯಿ ಜಯಮ್ಮ ಇದ್ದಾರೆ.
‘15 ದಿನಗಳ ಹಿಂದಷ್ಟೇ ರಜೆಯ ಮೇಲೆ ಊರಿಗೆ ಬಂದು ಎಲ್ಲರೊಂದಿಗೆ ಕಲೆತು ನಗು ನಗುತ್ತಾ ಮಾತನಾಡಿದ್ದ ಗಿರೀಶ್ ಇಲ್ಲವೆಂದರೆ ನಂಬುವುದು ಕಷ್ಟವಾಗುತ್ತಿದೆ. ದೇಶ ಸೇವೆಗೆ ತಮ್ಮನ್ನು ಮುಡಿಪಾಗಿರಿಸಿಕೊಂಡು ಉತ್ತರ ಭಾರತದ ಹಲವೆಡೆ ಕರ್ತವ್ಯ ನಿರ್ವಹಿಸಿದ್ದರು. ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಒಳ್ಳೆಯ ವ್ಯಕ್ತಿ ಅವರಾಗಿದ್ದರು’ ಎಂದು ಗ್ರಾಮಸ್ಥ ಬಿ.ಜಿ.ಬಸಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.