ADVERTISEMENT

ದತ್ತಾತ್ರಿನಗರದಲ್ಲಿ ಮನೆಗೆ ನುಗ್ಗಿ ಬಂಗಾರ, ಹಣ ದೋಚಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:26 IST
Last Updated 28 ಜನವರಿ 2026, 7:26 IST
   

ಕಡೂರು: ಪಟ್ಟಣದ ದತ್ತಾತ್ರಿನಗರ (ಸಾಯಿ ದೇವಸ್ಥಾನ ಸಮೀಪ) ವಾಸವಾಗಿರುವ ಪ್ರವೀಣ್‌ಕುಮಾರ್ (ಮೆಡಿಕಲ್ ಶಾಪ್) ಅವರ ಮನೆಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿ ಬಂಗಾರದ ಆಭರಣ ಹಾಗೂ ಹಣವನ್ನು ದೋಚಿರುವ ಘಟನೆ ತಡವಾಗಿ ವರದಿಯಾಗಿದೆ.

ಮನೆ ಮಾಲೀಕ ಪ್ರವೀಣ್‌ಕುಮಾರ್‌ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಭಾನುವಾರ ರಾತ್ರಿ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. 

ಮಾಲೀಕ ಮನೆಯಲ್ಲಿಲ್ಲದ ವೇಳೆ ಕಿಟಕಿಯ ಸರಳುಗಳನ್ನು ಆಯುಧದಿಂದ ಮುರಿದು, ಮನೆಯೊಳಗೆ ಪ್ರವೇಶ ಮಾಡಿರುವ ಕಳ್ಳರು ಬೆಡ್ ರೂಂನಲ್ಲಿರುವ ಬೀರುವಿನ ಬೀಗ ಮುರಿದು 80 ಗ್ರಾಂ. ತೂಕದ ಒಂದು ಪೆಂಡೆಂಟ್ ಇರುವ ಬಂಗಾರದ ಲಾಂಗ್ ಚೈನ್, 100 ಗ್ರಾಂ. ತೂಕದ ಬಂಗಾರದ ಹರಳಿನ ನೆಕ್ಲೇಸ್ ಜೊತೆಗೆ ಬಿಳಿ ಹರಳಿನ 2 ಬಂಗಾರದ ಬಳೆಗಳು, 20 ಗ್ರಾಂ. ತೂಕದ ಬಂಗಾರದ ಉಂಗುರಗಳು, 30 ಗ್ರಾಂ. ತೂಕದ 5 ಜೊತೆ ಬಂಗಾರದ ಕಿವಿ ಓಲೆಗಳು, 18 ಗ್ರಾಂ. ತೂಕದ ಬಂಗಾರದ 5 ಚಿನ್ನದ ಬಿಸ್ಕತ್‌ಗಳು, 270 ಗ್ರಾಂ. ತೂಕದ 4 ಬೆಳ್ಳಿಯ ಬಿಸ್ಕತ್ ಹಾಗೂ ₹2 ಲಕ್ಷ ನಗದು ಕಳ್ಳತನವಾಗಿದೆ. ಒಟ್ಟು 248 ಗ್ರಾಂ. ತೂಕದ ಚಿನ್ನದ ಆಭರಣಗಳು ಹಾಗೂ 270 ಗ್ರಾಂ. ಬೆಳ್ಳಿಯ ಬಿಸ್ಕತ್‌ ಮತ್ತು ನಗದು ಹಣ ದೋಚಿದ್ದಾರೆ.

ADVERTISEMENT

ಇವುಗಳ ಒಟ್ಟು ಮೌಲ್ಯ ₹27.30 ಲಕ್ಷ ಎಂದು ಪ್ರವೀಣ್‌ಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ. ಕಡೂರು ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದು, ಕಳ್ಳರನ್ನು ಹುಡುಕಲು ಪೊಲೀಸರು ವಿವಿಧ ಮೂಲಗಳ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.