ನರಸಿಂಹರಾಜಪುರ: ರಾಜ್ಯ ಸರ್ಕಾರ ಶಕ್ತಿಯೋಜನೆಯನ್ನು ಜಾರಿಗೊಳಿಸಿ ಎರಡು ವರ್ಷ ಕಳೆದಿದೆ. ಆದರೆ, ಈ ಸವಲತ್ತನ್ನು ಸಮರ್ಪಕವಾಗಿ ಪಡೆಯಲು ನರಸಿಂಹರಾಜಪುರ ವ್ಯಾಪ್ತಿಯ ಮಹಿಳೆಯರು ವಂಚಿತರಾಗಿದ್ದಾರೆ ಎಂಬ ದೂರು ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಬಸ್‌ಗಳ ಕೊರತೆ ಎಂಬುದು ಗಮನಾರ್ಹ.
ಹಿಂದೆ ಖಾಸಗಿ ಬಸ್ ಸೇವೆಯ ಜತೆಗೆ ಹಲವು ಸರ್ಕಾರಿ ಬಸ್ ಸೌಲಭ್ಯ ಈ ಭಾಗದ ಜನರಿಗೆ ಸಿಗುತ್ತಿತ್ತು. ಕೋವಿಡ್ ಬಳಿಕ ಬಹುತೇಕ ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಸರ್ಕಾರಿ ಬಸ್‌ಗಳನ್ನೇ ಜನ ಅವಲಂಬಿಸಿದ್ದರು. ನರಸಿಂಹರಾಜಪುರ ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಪ್ರಯಾಣಿಸಲು ಒಂದು ಬಸ್ ಮಾತ್ರ ಇದೆ. ಬೆಳಿಗ್ಗೆ 6.20 ಹೊರಡುವ ಈ ಬಸ್ ತಪ್ಪಿದರೆ ಜಿಲ್ಲಾ ಕೇಂದ್ರ ತಲುಪಲು ಯಾವುದೇ ಬಸ್ ಇಲ್ಲ.
ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ ಖಾಸಗಿ ಬಸ್‌ನಲ್ಲಿ ಬಾಳೆಹೊನ್ನೂರಿನವರೆಗೆ ಹೋಗಿ ಅಲ್ಲಿಂದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಬೇಕಾದ ಸ್ಥಿತಿ ಇದೆ. ಸಂಜೆ 4.15ಕ್ಕೆ ಜಿಲ್ಲಾ ಕೇಂದ್ರದಿಂದ ಹೊರಡುವ ಸರ್ಕಾರಿ ಬಸ್ ತಪ್ಪಿದರೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ.
ಕೋವಿಡ್ ಪೂರ್ವದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ಕೆಎಸ್‌ಆರ್‌ಟಿಸಿ ಡಿಪೊದಿಂದ ಬೆಂಗಳೂರಿ– ಶೃಂಗೇರಿಗೆ ಬಸ್ ಸೇವೆ ಆರಂಭಿಸಲಾಗಿತ್ತು. ಈ ಬಸ್ ಶೃಂಗೇರಿಯಿಂದ ಬೆಳಿಗ್ಗೆ ಹೊರಟು ಕೊಪ್ಪ, ಎನ್.ಆರ್.ಪುರ, ತರೀಕೆರೆ, ಕಡೂರು ಮಾರ್ಗವಾಗಿ ಬೆಂಗಳೂರು ಮೂಲಕ ಕೋಲಾರಕ್ಕೆ ಹೋಗುತ್ತಿತ್ತು. ಇದರಿಂದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ತರೀಕೆರೆ ಉಪವಿಭಾಗಾಧಿಕಾರಿ ಕಚೇರಿಗೆ ಹೋಗುವವರಿಗೆ ಅನುಕೂಲ ವಾಗುತ್ತಿತ್ತು. ಈ ಬಸ್ ಸ್ಥಗಿತಗೊಳಿಸಿರುವುದರಿಂದ ಬೆಳಿಗ್ಗೆ ತರೀಕೆರೆ ಭಾಗಕ್ಕೆ ಹೋಗುವ ಬಸ್ ಇಲ್ಲವಾಗಿದೆ. ಸುತ್ತಿ ಬಳಸಿ ಹೋಗುವ ಸ್ಥಿತಿಯಿದೆ. ಹಿಂದೆ ಎನ್.ಆರ್.ಪುರದಿಂದ ಬೆಳಿಗ್ಗೆ 6ಕ್ಕೆ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಸೇವೆಯನ್ನು ಹಲವು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಬೆಳಿಗ್ಗೆ 10ರ ವೇಳೆಗೆ ತರೀಕೆರೆಗೆ ಬಸ್ ಬಿಡಲಾಗಿದ್ದರೂ ಇದು ಕಾಲೇಜು ವಿದ್ಯಾರ್ಥಿಗಗಳಿಗೆ ಪ್ರಯೋಜವಾಗುತ್ತಿಲ್ಲ.
ಮಲೆನಾಡಿನ ಭಾಗದಲ್ಲಿನ ಗ್ರಾಮೀಣ ಜನರಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹಲವು ಬಸ್ ಸೇವೆ ಸ್ಥಗಿತಗೊಳಿಸಿದ್ದು, ಸರ್ಕಾರದ ಯೋಜನೆಯ ಪ್ರಯೋಜನ ಲಭಿಸುತ್ತಿಲ್ಲ ಎಂದು ಹಿರಿಯ ನಾಗರಿಕ ಎಚ್.ಎನ್.ರವಿಶಂಕರ್ ತಿಳಿಸಿದರು.
ಬೆಳಿಗ್ಗೆ ಶೃಂಗೇರಿಯಿಂದ ಅಜ್ಜಂಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸುವಂತೆ ಶಾಸಕರಿಗೆ, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ತಿಳಿಸಿದರು.
ರಿಯಾಯಿತಿಯಿಂದ ವಂಚಿತರಾಗುತ್ತಿರುವ ಜನ
ಶಿವಮೊಗ್ಗದಿಂದ ಬೆಳಿಗ್ಗೆ ಹೊರಟು ಎನ್.ಆರ್.ಪುರ ಮಾರ್ಗದ ಮೂಲಕ ಧರ್ಮಸ್ಥಳಕ್ಕೆ ಹೋಗುವ ಬಸ್ ಸೇವೆಯನ್ನೂ ಸ್ಥಗಿತಗೊಳಿಸಿರುವುದರಿಂದ ಮಲೆನಾಡಿನ ಭಾಗದಿಂದ ಧರ್ಮಸ್ಥಳಕ್ಕೆ ಹೋಗುವವರಿಗೆ ನೇರ ಸಂಪರ್ಕದ ಬಸ್ ಸೌಲಭ್ಯವಿಲ್ಲದಂತಾಗಿದೆ. ಪ್ರಸ್ತುತ ಲಕ್ಕವಳ್ಳಿ ತರೀಕೆರೆ ಕಡೂರು ಬೀರೂರು ಅಜ್ಜಂಪುರ ಊರುಗಳಿಗೆ ಹೋಗಲು ಬೆಳಗ್ಗಿನ ಸಮಯದಲ್ಲಿ ಬಸ್ ಸೌಲಭ್ಯವಿಲ್ಲದಿರುವುದರಿಂದ ಶಿವಮೊಗ್ಗಕ್ಕೆ ಹೋಗಿ ಬೇರೆಡೆ ಪ್ರಯಾಣಿಸುವ ಸ್ಥಿತಿಯಿದೆ. ಶಿವಮೊಗ್ಗದಿಂದ ಶೃಂಗೇರಿಗೆ ಬೆರಳೆಣಿಕೆಯಷ್ಟು ಬಸ್‌ಗಳಿವೆ. ಸರ್ಕಾರಿ ಬಸ್ ಸೌಲಭ್ಯದ ಕೊರತೆ ಇರುವುದರಿಂದ ಶಕ್ತಿ ಯೋಜನೆಯೂ ಸೇರಿದಂತೆ ಬಸ್‌ಗಳಲ್ಲಿ ಹಿರಿಯ ನಾಗರಿಕರು ಶಾಲಾ ಕಾಲೇಜು ಮಕ್ಕಳಿಗೆ ಸಿಗುವ ರಿಯಾಯಿತಿಯಿಂದ ವಂಚಿತವಾಗುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.