ADVERTISEMENT

ಎಗ್ಗಿಲ್ಲದೇ ಸಾಗಿದ ಜಾನುವಾರು ಕಳ್ಳ ಸಾಗಣೆ

ನರಸಿಂಹರಾಜಪುರ: ಹಸು ಸಾಕಾಣಿಕೆದಾರರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:56 IST
Last Updated 25 ನವೆಂಬರ್ 2025, 3:56 IST
ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀಡು ಬಿಟ್ಟಿರುವ ದನಗಳು
ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀಡು ಬಿಟ್ಟಿರುವ ದನಗಳು   

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಕೆಲ ತಿಂಗಳಿನಿಂದ ಜಾನುವಾರುಗಳ ಕಳ್ಳ ಸಾಗಣೆ ಹೆಚ್ಚುತ್ತಿರುವುದು ಸಾಕಾಣಿಕೆದಾರರ ಆತಂಕಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ರಾತ್ರಿ ವೇಳೆ ಮನೆಗೆ ಹಿಂದಿರುಗದೇ ಪ್ರಮುಖ ಸ್ಥಳಗಳಲ್ಲಿ ಬೀಡು ಬಿಡುವ ದನಗಳನ್ನು ಗುರಿಯಾಗಿಟ್ಟುಕೊಂಡು ಜಾನುವಾರು ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿ ಕಳ್ಳ ಸಾಗಣೆ ಮಾಡುತ್ತಿದ್ದಾರೆ. 

ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚಾಗಿ ದನಗಳು ಬೀಡು ಬಿಡುವ ಸ್ಥಳಗಳಾದ ಅಗ್ರಹಾರ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಪ್ರವಾಸಿಮಂದಿರ ಹಳೇಪೇಟೆ, ಜೈಲು ರಸ್ತೆ ಹಾಗೂ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ದನಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತಿದೆ.

ADVERTISEMENT

ಬಹುತೇಕ ಮಧ್ಯರಾತ್ರಿ 2 ರಿಂದ 3ಗಂಟೆ ವೇಳೆಯಲ್ಲಿ ವಾಹನಗಳಲ್ಲಿ ಬರುವ ದನಗಳ್ಳರು, ಬೀಡಾಡಿ ದನಗಳಿಗೆ ಮಂಪರು ಬರುವ ಔಷಧಿ ಹಾಕಿರುವ ಬ್ರೆಡ್ ತಿನ್ನಲು ನೀಡುತ್ತಾರೆ. ನಂತರ ಅವು ನಿದ್ದೆಗೆ ಜಾರಿದಾಗ ದನಗಳ ಮುಂಗಾಲನ್ನು ಎತ್ತಿ ವಾಹನಕ್ಕೆ ತುಂಬಿಸಿಕೊಂಡು ಹೋಗುತ್ತಾರೆ. ದನಗಳ್ಳರು ವಾಹನದಲ್ಲಿ ಲಾಂಗು,ಮಚ್ಚುಗಳನ್ನು ಇಟ್ಟುಕೊಂಡಿರುವುದರಿಂದ ಸಾರ್ವಜನಿಕರು ತಡೆಯಲು ಹೋದರೆ ಹಲ್ಲೆ ಮಾಡುವುದಕ್ಕೆ ಕೂಡ ಹಿಂಜರಿಯುವುದಿಲ್ಲ. ಹಾಗಾಗಿ ಏನೂ ಮಾಡದ ಸ್ಥಿತಿಯಿದೆ ಎನ್ನುತ್ತಾರೆ ದನಗಳನ್ನು ಕಳ್ಳಸಾಗಾಣೆ ಮಾಡುವುದನ್ನು ಕಂಡ ಪ್ರತ್ಯಕ್ಷದರ್ಶಿಗಳು.

ಕೃಷಿ ಕೆಲಸಕ್ಕಾಗಿ ಮೂರು ಎತ್ತುಗಳನ್ನು ಸಾಕಾಣಿಕೆ ಮಾಡಲಾಗಿತ್ತು. ಪ್ರತಿ ನಿತ್ಯ ಗ್ರಾಮದ ಸಮೀಪದ ಪ್ರದೇಶದಲ್ಲಿ ಮೇಯಲು ಬಿಡುತ್ತಿದ್ದೆವು. ದೀಪಾವಳಿ ಸಮಯದಲ್ಲಿ ಅಕ್ಟೋಬರ್ 22ರಂದು ಗೋ ಪೂಜೆಗೆ ಎತ್ತುಗಳನ್ನು ಹುಡುಕಲು ಹೋದಾಗ ಮೇಯಲು ಹೋಗಿದ್ದ ಸ್ಥಳದಲ್ಲಿ ಇರಲಿಲ್ಲ. ಅನುಮಾನ ಬಂದು ಬಿ.ಎಚ್.ಕೈಮರದ ಗೇಟ್‌ನ ಸಮೀಪವಿರುವ ಸಿಸಿಟಿವಿ ಕ್ಯಾಮೆರಾ, ಅಗ್ರಹಾರದ ಬಳಿಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಎತ್ತುಗಳು ಹಾಗೂ ದನಗಳನ್ನು ತುಂಬಿಕೊಂಡ ವಾಹನ ಬೆಳಗಿನ ಜಾವ ಹೋಗಿರುವುದು ಸೆರೆಯಾಗಿತ್ತು. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೂರು ಎತ್ತುಗಳಲ್ಲಿ ಒಂದು ಎತ್ತು ಹಾಯುತ್ತಿದ್ದರಿಂದ ಇದನ್ನು ಬಿಟ್ಟು ಉಳಿದ ಎರಡು ಎತ್ತುಗಳನ್ನು ತುಂಬಿಕೊಂಡು ಹೋಗಿದ್ದಾರೆ. ಕಷ್ಟಪಟ್ಟು ಸಾಕಿದ್ದ ಎರಡು ಎತ್ತುಗಳು ಕಳ್ಳರ ಪಾಲಾಗಿದ್ದರಿಂದ ಅಂದಾಜು ₹80 ಸಾವಿರಕ್ಕೂ ಅಧಿಕ ನಷ್ಟವುಂಟಾಗಿದೆ ಎಂದು ಸಿರಿಗಳಲೆ ಗ್ರಾಮ ನಿವಾಸಿ ವರುಣ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಳೆದ ಕೆಲವು ತಿಂಗಳ ಹಿಂದೆ ಹೋರಿ ಕರು ಕಾಣೆಯಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ಸಹ ನೀಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ದನಕಳ್ಳತನ ಆಗುತ್ತಿರುವುದರಿಂದ ಇದನ್ನು ಸಾಕಾಣಿಕೆ ಮಾಡುವುದು ಕಷ್ಟವಾಗುತ್ತಿದ್ದು ಇದರಿಂದ ಬೇಸತ್ತು 6 ಹೋರಿ ಹಾಗೂ 2 ಕರುಗಳನ್ನು ಮಾಗುಂಡಿಯಲ್ಲಿರುವ ಗೋ ಶಾಲೆಗೆ ಉಚಿತವಾಗಿ ಕೊಟ್ಟು ಬಂದೆ’ ಎಂದು ಅಗ್ರಹಾರದ ನಿವಾಸಿ ಶ್ರೀಕಾಂತ್ ತಿಳಿಸಿದರು.

ಕಳೆದ ಕೆಲವು ದಿನಗಳ ಹಿಂದೆ ಬೆಟ್ಟಗೆರಿ ಬಡಾವಣೆ ನಿವಾಸಿಯೊಬ್ಬರ ಹಸುವನ್ನು ದನಗಳ್ಳರು ಪಟ್ಟಣದ ಅರಣ್ಯ ಇಲಾಖೆ ಸಮೀಪ ಕಾರಿಗೆ ತುಂಬುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿರುವುದು ಕಂಡು ಬಂದಿದೆ.

ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ದನಗಳ್ಳತನ ಅವ್ಯಾಹತವಾಗಿ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ. ದನಕಳ್ಳತನ ಮಾಡುವ ತಂಡದ ಹಿಂದೆ ಸ್ಥಳೀಯರ ಕೈವಾಡ ಇರುವ ಸಾಧ್ಯತೆಯೂ ಇದ್ದು, ಇದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ದನಗಳ್ಳತನ ತಡೆಗಟ್ಟಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀಡು ಬಿಟ್ಟಿರುವ ದನಗಳು

ದನ ಅಕ್ರಮ ಸಾಗಣೆ ತಡೆಗೆ ಹಲವು ಕ್ರಮ

ಪಟ್ಟಣದ ವ್ಯಾಪ‍್ತಿಯಲ್ಲಿ ದನಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದನ್ನು ತಡೆಗಟ್ಟಲು ಪೊಲೀಸರ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಈ ಹಿಂದೆ ದನ ಸಾಗಣೆ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಮುತ್ತಿನಕೊಪ್ಪದ ಚೆಕ್‌ಫೋಸ್ಟ್ ಬಳಿ ಕೆನರಾ ಬ್ಯಾಂಕ್ ಸಹಕಾರದಿಂದ ಅತ್ಯಾಧುನಿಕ ತಂತ್ರಜ್ಞಾನದ ವಾಹನದ ನಂಬರ್ ಪ್ಲೇಟ್ ದಾಖಲಾಗುವ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಬಿ.ಎಚ್.ಕೈಮರ ವ್ಯಾಪ್ತಿಯಲ್ಲೂ ಇನ್ನೂ 15 ದಿನಗಳೊಳಗೆ ಅತ್ಯಾಧುನಿಕ ತಂತ್ರಜ್ಞಾನದ ₹1.50 ಲಕ್ಷ ವೆಚ್ಚದ ಸಿ.ಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಎನ್‌.ಆರ್‌.ಪುರ. ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ನಿರಂಜನಗೌಡ ‘ಪ್ರಜಾವಾಣಿ’ ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.