ADVERTISEMENT

ಖಾಸಗಿ ಆಸ್ಪತ್ರೆಗೆ ರೆಫರ್: ತನಿಖೆಗೆ ಸೂಚನೆ

ಖಾಸಗಿ ಆಸ್ಪತ್ರೆಯಲ್ಲಿ ಶೇ 79ರಷ್ಟು ಸಿಸೇರಿಯನ್: ರಾಜೇಂದರ್‌ಕುಮಾರ್ ಕಟಾರಿಯಾ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:44 IST
Last Updated 26 ಜುಲೈ 2025, 6:44 IST
ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜೇಂದರ್‌ಕುಮಾರ್ ಕಟಾರಿಯಾ ಮಾತನಾಡಿದರು
ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜೇಂದರ್‌ಕುಮಾರ್ ಕಟಾರಿಯಾ ಮಾತನಾಡಿದರು   

ಚಿಕ್ಕಮಗಳೂರು: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ವೈದ್ಯರು ಕೇವಲ ರೆಫರ್ ಮಾಡುವ ಕೆಲಸ ಮಾಡುತ್ತಿದ್ದು, ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಸೂಚನೆ ನೀಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘2024–25ನೇ ಸಾಲಿನಲ್ಲಿ 2,908 ಹೆರಿಗೆಗಳಾಗಿದ್ದರೆ, ಶೇ 62ರಷ್ಟು ಸಿಸೇರಿಯನ್ ಹೆರಿಗೆಗಳಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 79ರಷ್ಟು ಸಿಸೇರಿಯನ್‌ ಹೆರಿಗೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಮತ್ತು ಹೊರ ಜಿಲ್ಲೆಗೆ ಕಳುಹಿಸುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಿಲ್ಲವೇ,  ಸರ್ಕಾರಿ ಆಸ್ಪತ್ರೆಯ ವೈದ್ಯರು ಕೇವಲ ರೆಫರ್ ಮಾಡುವ ಕೆಲಸಕ್ಕೆ ಇದ್ದಾರೆಯೇ, ಇದು ಸರಿಯಾದ ಕ್ರಮ ಅಲ್ಲ. ಕಾರಣವಿಲ್ಲದೆ ಖಾಸಗಿ ಆಸ್ಪತ್ರೆ ಮತ್ತು ಹೊರ ಜಿಲ್ಲೆಯ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದರೆ ಅಂಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಕಡೂರು ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಖಾಸಗಿ ಅಸ್ಪತ್ರೆಗಳಲ್ಲಿ ಅದರಲ್ಲೂ ಸಿಸೇರಿಯನ್ ಹೆರಿಗೆ ಹೆಚ್ಚಾಗಿ ಮಾಡಲಾಗಿದೆ. ಈ ಬಗ್ಗೆ ಸಮಗ್ರವಾಗಿ ವಿಶ್ಲೇಷಣೆ ನಡೆಸಿ ವರದಿ ನೀಡಬೇಕು ಎಂದು ತಿಳಿಸಿದರು.

‘ಹಾಸನದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನವರನ್ನು ಕಳುಹಿಸಲಾಗುತ್ತಿದೆ. ಇದು ಏಕೆ, ಅಲ್ಲಿರುವ ಸೌಕರ್ಯಗಳೇನು, ಇಲ್ಲಿರುವ ಕೊರತೆಗಳೇನು ಎಂಬುದನ್ನು ತಿಳಿಸಿ. ಕೊರತೆಗಳಿದ್ದರೆ ಸರಿಪಡಿಸಲಾಗುವುದು. ಇದನ್ನು ಮಾಡದೆ ವೈದ್ಯರು ಕೇವಲ ರೆಫರ್ ಮಾಡುತ್ತಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಹೆರಿಗೆ ಸಂದರ್ಭದಲ್ಲಿ ಸಮಸ್ಯೆಯಾದರೆ ಜವಾಬ್ದಾರಿ ತಮ್ಮ ತಲೆಗೆ ಬರಲಿದೆ ಎಂಬ ಕಾರಣಕ್ಕೆ ಹೆಚ್ಚಿನದಾಗಿ ರೆಫರ್ ಮಾಡುತ್ತಿದ್ದಾರೆ’ ಎಂದು ಡಿಎಚ್‌ಒ ಅಶ್ವತ್ಥಬಾಬು ತಿಳಿಸಿದರು.

‘ವೈದ್ಯರು ತಮ್ಮ ವೃತ್ತಿ ನಿರ್ವಹಿಸುವಾಗ ಕೆಲ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಜವಾಬ್ದಾರಿಗೆ ಹೆದರಿ ವೃತ್ತಿಯನ್ನೇ ಕೈಬಿಡಲು ಸಾಧ್ಯವೇ, ಈ ರೀತಿ ಕ್ಷುಲ್ಲಕ ಕಾರಣಕ್ಕೆ ಬೇರೆ ಆಸ್ಪತ್ರೆಗೆ ಕಳುಹಿಸುತ್ತಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಿ’‍ ಎಂದು ಸೂಚನೆ ನೀಡಿದರು.

ಜಿಲ್ಲೆಯ ಅಮೃತಮಹಲ್ ಕಾವಲಿನ ಒತ್ತುವರಿ ತೆರವುಗೊಳಿಸಬೇಕು. ಈ ಬಗ್ಗೆ ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ ಏಕೆ ಎಂದು ಕಟಾರಿಯಾ ಪ್ರಶ್ನಿಸಿದರು. ಕೂಡಲೇ ಜಂಟಿ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಅಮೃತಮಹಲ್ ಕಾವಲ್ ಪ್ರದೇಶವನ್ನು ವಶಕ್ಕೆ ಪಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು.

ರಸ್ತೆ ಸೇತುವೆ ಹಾನಿ: ₹45.25 ಕೋಟಿ ನಷ್ಟ ಜೂನ್‌ನಿಂದ ಇದುವರೆಗೆ ಮಳೆಯಿಂದಾಗಿ ರಸ್ತೆ ಮತ್ತು ಸೇತುವೆ ಹಾನಿಯಾಗಿ ₹45.25 ಕೋಟಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದರು. ‌11.49 ಕಿ.ಮೀ.ನಷ್ಟು ರಾಜ್ಯ ಹೆದ್ದಾರಿ ಹಾನಿಯಾಗಿದ್ದು ₹6.15 ಕೋಟಿ ನಷ್ಟವಾಗಿದೆ. 10.97 ಕಿ.ಮೀ.ನಷ್ಟು ಜಿಲ್ಲಾ ಮುಖ್ಯ ರಸ್ತೆ ಹಾನಿಗೀಡಾಗಿ ₹19.59 ಕೋಟಿ ನಷ್ಟವಾಗಿದೆ. ಒಟ್ಟು 16 ಸೇತುವೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದರು. 525 ಕಿಲೋ ಮೀಟರ್ ಗ್ರಾಮೀಣ ರಸ್ತೆಗಳು ಹಾನಿಯಾಗಿದ್ದು ಇದರಿಂದ ₹27.55 ಕೋಟಿ ನಷ್ಟ ಸಂಭವಿಸಿದೆ. ಗ್ರಾಮೀಣ ಭಾಗದಲ್ಲಿ 28 ಸೇತುವೆ ಮತ್ತು ಕಲ್ವರ್ಟ್‌ಗಳು ಹಾನಿಗೀಡಾಗಿದ್ದು ₹4.40 ಲಕ್ಷ ನಷ್ಟವಾಗಿದೆ. ಇದೇ ಅವಧಿಯಲ್ಲಿ ಒಟ್ಟು 11 ಸರ್ಕಾರಿ ಶಾಲಾ ಕಟ್ಟಡಗಳು ಮಳೆಯಿಂದ ಹಾನಿಗೀಡಾಗಿದ್ದು ₹22 ಲಕ್ಷ ನಷ್ಟವಾಗಿದೆ ಎಂದು ವಿವರಿಸಿದರು. ಒಟ್ಟು 28 ಮನೆಗಳಿಗೆ ಹಾನಿಯಾಗಿದ್ದು ಈ ಪೈಕಿ 9 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. 8 ಮನೆಗಳಿಗೆ ಪರಿಹಾರ ನೀಡಲಾಗಿದೆ. ಉಳಿದ 16 ಮನೆಗಳಿಗೆ ಪರಿಹಾರ ನೀಡುವುದು ಬಾಕಿ ಇದೆ. 1273 ವಿದ್ಯುತ್ ಕಂಬಗಳು ಉರುಳಿದ್ದು ಮೆಸ್ಕಾಂಗೆ ₹2.17 ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು. ಹಾನಿಗೊಳಗಾದ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ. ಚಿಕ್ಕಮಗಳೂರಲ್ಲಿ 523 ಮೂಡಿಗೆರೆಯಲ್ಲಿ 79 ಕಳಸ 87 ಕಡೂರು 22 ತರೀಕೆರೆ 33 ಎನ್.ಆರ್.ಪುರ 250 ಕೊಪ್ಪ 145 ಹಾಗೂ ಶೃಂಗೇರಿಯಲ್ಲಿ 97 ವಿದ್ಯುತ್ ಕಂಬಗಳನ್ನು ಬದಲಿಸಲಾಗಿದೆ ಎಂದರು.

‘ಅನುದಾನತ ಶಾಲೆಗಳ ವಿರುದ್ಧ ಕ್ರಮ ಏಕಿಲ್ಲ’

ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಲಾಗಿತ್ತು. ಕ್ರಮ ಜರುಗಿಸದಿರುವ ಬಗ್ಗೆ ರಾಜೇಂದರ್‌ಕುಮಾರ್ ಕಟಾರಿಯಾ ಅಸಮಾಧಾನ ವ್ಯಕ್ತಪಡಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಜೆ.ಪುಟ್ಟರಾಜು ಮಾಹಿತಿ ನೀಡಿ ‘ಶೇ 60‌ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಜಿಲ್ಲೆಯ ಅನುದಾನಿತ ಶಾಲೆಗಳಿಗೆ ಕಾರಣ ಕೇಳಿ ನೋಟಿಸು ಜಾರಿ ಮಾಡಲಾಗಿದೆ’ ಎಂದರು. ಶೇ 50ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ 13 ಅನುದಾನಿತ ಪ್ರೌಢಶಾಲೆಗಳ ಮಾನ್ಯತೆ ರದ್ದುಪಡಿಸುವ ಕುರಿತು ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರಲು 29 ಅಂಶಗಳ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.