ADVERTISEMENT

ಬದಲಾವಣೆ ಬಂದೂಕಿನಿಂದಲ್ಲ, ಹೋರಾಟದಿಂದ: ಲೋಕೇಶ್

ಸಿಪಿಐ ತಾಲ್ಲೂಕು ಸಮಾವೇಶ, ಶತಮಾನೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:54 IST
Last Updated 18 ಜೂನ್ 2025, 13:54 IST
ನಗರದ ಸಿಪಿಐ ಕಚೇರಿಯಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನ ಸಂಭ್ರಮ ಹಾಗೂ ತಾಲ್ಲೂಕು ಸಮಾವೇಶ ಕಾರ್ಯಕ್ರಮದಲ್ಲಿ ಪಿ.ವಿ.ಲೋಕೇಶ್ ಮಾತನಾಡಿದರು
ನಗರದ ಸಿಪಿಐ ಕಚೇರಿಯಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನ ಸಂಭ್ರಮ ಹಾಗೂ ತಾಲ್ಲೂಕು ಸಮಾವೇಶ ಕಾರ್ಯಕ್ರಮದಲ್ಲಿ ಪಿ.ವಿ.ಲೋಕೇಶ್ ಮಾತನಾಡಿದರು   

ಚಿಕ್ಕಮಗಳೂರು: ‘ಜನರಲ್ಲಿ ಕ್ರಾಂತಿಕಾರಿ ಬದಲಾವಣೆ ಮೂಡಿಸುವುದು ಬಂದೂಕಿನಿಂದಲ್ಲ, ಹೊಸ ರಾಜಕೀಯ ಬದಲಾವಣೆ ಅರ್ಥೈಸಿಕೊಂಡು, ನಿವೇಶನ ಹಾಗೂ ಭೂ ರಹಿತರು ಹೋರಾಟ ರೂಪಿಸಿದಾಗ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಹೇಳಿದರು.

ನಗರದ ಸಿಪಿಐ ಕಚೇರಿಯಲ್ಲಿ ಬುಧವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನ ಸಂಭ್ರಮ ಹಾಗೂ ತಾಲ್ಲೂಕು ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೋವು, ನಿರಾಸೆ ಹಾಗೂ ಶೋಷಿತರ ಪರವಾಗಿ ನಿರಂತರವಾಗಿ ಹೋರಾಡುತ್ತಿರುವ ಪಕ್ಷ ಸಿಪಿಐ. ಎರಡು ರಾಷ್ಟ್ರೀಯ ಪಕ್ಷಗಳು ರೈತರು, ಕಾರ್ಮಿಕ ವರ್ಗವನ್ನು ಅಡಿಯಾಳಾಗಿ ಮಾಡಿಕೊಂಡು ವೈಯಕ್ತಿಕವಾಗಿ ಸಿರಿ ಸಂಪತ್ತು ಹೆಚ್ಚಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ADVERTISEMENT

ದೇಶದಲ್ಲಿ ಶೇ 80ರಷ್ಟು ದುಡಿಯುವ ವರ್ಗದಿಂದ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ಆಸ್ತಿ-ಅಂತಸ್ತು ಹೆಚ್ಚಿಸಿಕೊಂಡಿದ್ದಾರೆ. ಜಾತಿ ತಾರತಮ್ಯ, ಬಡವ-ಶ್ರೀಮಂತರ ಅಂತರ ಹೆಚ್ಚಾಗುತ್ತಿದೆ. ಇದರ ವಿರುದ್ಧ ಕಮ್ಯೂನಿಸ್ಟ್ ಪಕ್ಷ ಹೋರಾಟ ರೂಪಿಸಿದ ಕಾರಣ ಇಂದು ಶೋಷಿತರು ಸ್ವಾಭಿಮಾನದ ಜೀವನಕ್ಕೆ ದಾರಿಯಾಗಿದೆ ಎಂದರು.

ದೇಶದ ಬಹುಸಂಖ್ಯಾತರನ್ನು ಮುಂಚೂಣಿಗೆ ತರಲು ಜಾತಿ ಸಮೀಕ್ಷೆ ಮುಖ್ಯ. ಈ ಹಿಂದೆ 1932ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಜಾತಿ ಸಮೀಕ್ಷೆ ನಡೆದಿತ್ತು. ಇದಾದ ಬಳಿಕ ಇಂದಿಗೂ ದೇಶದಲ್ಲಿ ಸಮೀಕ್ಷೆಗೆ ಯಾವ ಸರ್ಕಾರಗಳು ಆಸಕ್ತಿ ತೋರಿಲ್ಲ. ಬಹು ಜನರನ್ನು ತುಳಿಯುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ರಾಜಕಾರಣ ಬಹಳಷ್ಟು ಕಠಿಣತೆಯಿಂದ ಕೂಡಿದೆ. ತೆರಿಗೆ, ರೈತರ ಸಮಸ್ಯೆ, ವಸತಿ, ಶಿಕ್ಷಣ, ಆಹಾರ ಪದ್ಧತಿ ಅಪಾಯದಲ್ಲಿದೆ. ಹಣವಿದ್ದವರಿಗೆ ಮಾತ್ರ ಅಧಿಕಾರ ಎಂಬಂತಾಗಿದೆ. ಜಾತಿ ಪ್ರಾಬಲ್ಯವೇ ದೊಡ್ಡ ಶಕ್ತಿ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಕಾರ್ಮಿಕರು, ರೈತರು ಎಚ್ಚೆತ್ತುಕೊಂಡು ಶಕ್ತಿ ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಘನತೆಯಿಂದ ಜೀವಿಸಲು ಸಾಧ್ಯ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಸಜ್ಜಾಗಬೇಕು. ದುಡಿವ ವರ್ಗವನ್ನು ಆಳುವ ವರ್ಗವಾಗಿ ರೂಪಿಸಬೇಕು’ ಎಂದು ತಿಳಿಸಿದರು.

ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಜಿ.ರಘು, ಕೆಳಗೂರು ರಮೇಶ್, ಎಸ್.ವಿಜಯಕುಮಾರ್, ತಾಲ್ಲೂಕು ಸಹ ಕಾರ್ಯದರ್ಶಿ ಕುಮಾರ್, ನಗರ ಕಾರ್ಯದರ್ಶಿ ಜಿ.ರಮೇಶ್ ಇದ್ದರು.

‘ಸಿಪಿಐ ಉತ್ತಮ ಪಕ್ಷವಾಗಿ ಹೊರಹೊಮ್ಮಿದೆ’:

‘ರಾಜಕಾರಣಿಗಳು ವ್ಯಾಪಾರ ದೃಷ್ಟಿಯಿಂದ ರಾಜಕಾರಣ ಮಾಡುತ್ತಿದ್ದಾರೆ. ವಿಧಾನಸಭೆ ಸದಸ್ಯ ಸ್ಥಾನದ ಟಿಕೆಟ್‌ಗಾಗಿ ಜಾತಿ ಮತ್ತು ಖರ್ಚಿನ ಶಕ್ತಿ ಕೇಳುತ್ತಾರೆ. ಈ ನಡುವೆ ಸಿಪಿಐ ತ್ಯಾಗ ಬಲಿದಾನದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಉತ್ತಮ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ ಹೇಳಿದರು. ಚುನಾವಣಾ ಅಖಾಡದಲ್ಲಿ ಎಲ್ಲರೂ ನಮ್ಮನವರೇ ಎಂದು ಹೇಳುವ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರವನ್ನು ಮಾತ್ರ ಪ್ರಬಲ ಜಾತಿಗಳಿಗೆ ನೀಡುತ್ತಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.