ADVERTISEMENT

ಚಾರ್ಮಾಡಿ ಘಾಟಿಯ ಬಿದಿರುತಳದಲ್ಲಿ ತಡೆಗೋಡೆ ಕುಸಿತ: ಮತ್ತೆ ಆತಂಕ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 13:07 IST
Last Updated 12 ಸೆಪ್ಟೆಂಬರ್ 2022, 13:07 IST
ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪದಲ್ಲಿ ರಸ್ತೆ ತಡೆಗೋಡೆ ಕುಸಿದಿರುವುದು
ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪದಲ್ಲಿ ರಸ್ತೆ ತಡೆಗೋಡೆ ಕುಸಿದಿರುವುದು   

ಕೊಟ್ಟಿಗೆಹಾರ: ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯ ತಡೆಗೋಡೆ ಕುಸಿದಿದ್ದು, ಮತ್ತೆ ಆತಂಕ ಎದುರಾಗಿದೆ.

ತಡೆಗೋಡೆ ಕುಸಿದಿರುವುದು ಶನಿವಾರ ಪ್ರಯಾಣಿಕರ ಗಮನಕ್ಕೆ ಬಂದಿದೆ. ಆದರೆ, ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ. ತಡೆಗೋಡೆ ನಿರ್ಮಾಣವಾದ ಜಾಗದಲ್ಲೇ ಮಳೆಯ ನೀರು ನುಗ್ಗಿದ ಪರಿಣಾಮ ಸಮೇತ ಮಣ್ಣು ಕುಸಿದಿದೆ. ಇದೇ ಜಾಗದಲ್ಲಿ ಪ್ರಪಾತ ಇರುವುದರಿಂದ ವಾಹನ ಚಾಲಕರು ಎಚ್ಚರಿಕೆಯಿಂದ ಸಾಗಬೇಕಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ.

ಅಧಿಕಾರಿಗಳ ಭೇಟಿ: ತಡೆಗೋಡೆ ಕುಸಿತ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮುನಿರಾಜ್ ಭಾನುವಾರ ತಡರಾತ್ರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ADVERTISEMENT

‘ತಡೆಗೋಡೆ ಕುಸಿತ ಜಾಗದಲ್ಲಿ ಎಚ್ಚರಿಕೆಗಾಗಿ ಬ್ಯಾರಿಕೇಡ್‌ ಹಾಕಲಾಗಿದೆ. ಸಂಚಾರಕ್ಕೆ ಯಾವುದೇ ಅಪಾಯವಿಲ್ಲ. ಈಗಾಗಲೇ ಕುಸಿತ ಜಾಗಕ್ಕೆ ಪ್ಲಾಸ್ಟಿಕ್ ಹೊದಿಸಿ, ಇನ್ನಷ್ಟು ಕುಸಿಯದಂತೆ ತಡೆಯಲಾಗುವುದು. ವಿಪರೀತ ಮಳೆಯಿಂದ ಮಣ್ಣಿನ ಜತೆ ತಡೆಗೋಡೆಯೂ ಕುಸಿದಿದೆ. ಮಳೆ ಬರುತ್ತಿರುವುದರಿಂದ ತಡೆಗೋಡೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು’ ಎಂದು ಮುನಿರಾಜ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.