ADVERTISEMENT

ಚಾರ್ಮಾಡಿಘಾಟ್‌ ಲಿಂಕ್ ರಸ್ತೆ ಗೇಟ್‌ ಮುರಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:21 IST
Last Updated 18 ನವೆಂಬರ್ 2025, 6:21 IST
ಮೂಡಿಗೆರೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ಚಾರ್ಮಾಡಿ ಘಾಟ್‌ ರಸ್ತೆ
ಮೂಡಿಗೆರೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ಚಾರ್ಮಾಡಿ ಘಾಟ್‌ ರಸ್ತೆ   

ಮೂಡಿಗೆರೆ: ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೆಹಾರದ ಬಳಿ ಚಾರ್ಮಾಡಿ ಘಾಟ್‌ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ದೇವನಗೂಲ್‌ ಲಿಂಕ್ ರಸ್ತೆಗೆ ಪೊಲೀಸರ ನಿರ್ದೇಶನದಂತೆ ಅಳವಡಿಸಿದ್ದ ಕಬ್ಬಿಣದ ಗೇಟನ್ನು ದುಷ್ಕರ್ಮಿಗಳು ಕಿತ್ತೆಸೆದಿದ್ದಾರೆ.

ಕೊಟ್ಟಿಗೆಹಾರದ ಚೆಕ್‌ಪೋಸ್ಟ್‌ ತಪ್ಪಿಸುವ ಸಲುವಾಗಿ ಹಲವು ಕಾನೂನೂ ಬಾಹಿರ ಚಟುವಟಿಕೆಯ ವಾಹನಗಳು ದೇವನಗೂಲ್ ಮಾರ್ಗದ ಮೂಲಕ ಲಿಂಕ್ ರಸ್ತೆಯಲ್ಲಿ ಬಂದು ಚಾರ್ಮಾಡಿ ಘಾಟಿಗೆ ತಲುಪುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ‌ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಸೂಚನೆಯಂತೆ ಗೇಟನ್ನು ಅಳವಡಿಸಿ, ಗೇಟ್‌ನ ಕೀಲಿಯನ್ನು ಚೆಕ್‌ಪೋಸ್ಟ್ ಸಿಬ್ಬಂದಿ ವಶದಲ್ಲಿ ಇಟ್ಟು ನಿರ್ವಹಣೆ ಮಾಡುತ್ತಿದ್ದರು. ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಗೇಟ್ ಹಾಕಿ ಈ ರಸ್ತೆಯನ್ನು ಬಂದ್ ಮಾಡಲಾಗುತ್ತಿತ್ತು. ಇದರಿಂದ ಈ ಭಾಗದ ದನಗಳ ಕಳ್ಳ‌ಸಾಗಣೆ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಆದರೆ ಕಳೆದ ಶನಿವಾರ ರಾತ್ರಿ ಗೇಟನ್ನು ದುಷ್ಕರ್ಮಿಗಳು ಕಿತ್ತೆಸೆಯಲಾಗಿದೆ. 

'ಪೊಲೀಸರು–ಗ್ರಾಮಸ್ಥರು ಸೇರಿ ಹಾಕಿದ್ದ ಗೇಟನ್ನು ತೆರವುಗೊಳಿಸಿರುವುದು ಭದ್ರತಾ ವ್ಯವಸ್ಥೆಗೆ ಈ ಕೃತ್ಯ ಗಂಭೀರ ಸವಾಲಾಗಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ಸುರಕ್ಷತೆಗೆ ಕೈಗೊಂಡ ಕ್ರಮಗಳನ್ನು ಹಾಳು ಮಾಡುವ ಯತ್ನ ನಡೆದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ’ ಎಂದು ಬಣಕಲ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರೇಣುಕಾ ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.