ADVERTISEMENT

ಮಾನವೀಯ ಸಂಬಂಧ ಬದಲಾಗಬಾರದು

ಲಿಂಗೈಕ್ಯ ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 8:29 IST
Last Updated 17 ಜನವರಿ 2023, 8:29 IST
ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಶ್ರೀಗಳು ಸಂಗ್ರಹಿಸಿದ ಲಿಂಗೈಕ್ಯ ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಹಸ್ರ ನಾಮಾವಳಿ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಶ್ರೀಗಳು ಸಂಗ್ರಹಿಸಿದ ಲಿಂಗೈಕ್ಯ ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಹಸ್ರ ನಾಮಾವಳಿ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು.   

ಅಜ್ಜಂಪುರ: ‘ಸಮಾಜದಲ್ಲಿ ಸ್ಥಾನಮಾನ, ಆಸ್ತಿ-ಅಂತಸ್ತು ಬದಲಾಗಬಹುದು. ಆದರೆ, ಮಾನವೀಯ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳು ಎಂದಿಗೂ ಬದಲಾಗಬಾರದು’ ಎಂದು ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬುಕ್ಕಾಂಬುಧಿ ಗ್ರಾಮದ ತಪೋಬೆಟ್ಟದಲ್ಲಿ ನಡೆದ ಲಿಂಗೈಕ್ಯ ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 87ನೇ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಲಿಂಗೈಕ್ಯ ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯರು ದೇಹಶುದ್ದಿ, ಮನಶುದ್ದಿ, ನಡೆಶುದ್ದಿ, ನುಡಿಶುದ್ದಿ ಹೊಂದಿ ನಡೆದವರು. ಭಕ್ತ ಸಮೂಹಕ್ಕೆ ಬೆಳಕು ತೋರಿದ್ದರು. ಗುರುವೆಂದರೆ ವ್ಯಕ್ತಿಯಲ್ಲ ಶಕ್ತಿ ಎಂಬುದನ್ನು ಸಾಬೀತು ಮಾಡಿದ್ದರು. ಅವರು ಮಾಡಿದ್ದ ತಪಸ್ಸು, ನಡೆದ ದಾರಿ, ನೀಡಿದ ಮಾರ್ಗದರ್ಶನ ಇಂದಿಗೂ ಚಿರಸ್ಥಾಯಿಯಾಗಿದೆ ಎಂದು ಸ್ಮರಿಸಿದರು.

ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಕಾರ್ಯ ಕ್ರಮ ಉದ್ಘಾಟಿಸಿದರು. ಎಡೆಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ADVERTISEMENT

ಬಿಳಕಿ, ಹುಣಸಘಟ್ಟ, ಬೀರೂರು, ಮಾದಿಹಳ್ಳಿ, ನಂದಿಪುರ, ಕಾರ್ಜುವಳ್ಳಿ, ಚನ್ನಗಿರಿ, ಕಡೇನಂದಿಹಳ್ಳಿ, ಪಾಲ್ತೂರು, ಹಾರನಹಳ್ಳಿ, ಮಳಲಿಮಠ, ಹಣ್ಣೆ, ತಾವರೆಕೆರೆ ಮಠದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಜುವಳ್ಳಿ ಸ್ವಾಮೀಜಿ ಸಂಗ್ರಹಿಸಿದ ಲಿಂಗೈಕ್ಯ ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಹಸ್ರ ನಾಮಾವಳಿ ಕೃತಿಯನ್ನು ರಂಭಾಪುರಿ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್ ಮುಖಂಡ ದೋರನಾಳು ಪರಮೇಶ್, ರತ್ನಮ್ಮ ಮಂಜುನಾಥ್, ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ, ಧ್ರುವಕುಮಾರ್, ಭದ್ರಾವತಿ ಎಸ್.ಎಸ್. ಉಮೇಶ್, ಚಂದ್ರಶೇಖರ್, ಟ್ರಸ್ಟ್ ಉಪಾಧ್ಯಕ್ಷ ವೀರಭದ್ರಪ್ಪ ಶೀಲವಂತರ ಮಾತನಾಡಿದರು.

ನಿವೃತ್ತ ಶಿಕ್ಷಕ ಮಹೇಶ್ವರಪ್ಪ, ಎಚ್.ಪಿ. ಮಲ್ಲಿಕಾರ್ಜುನ, ಮಮತ ಸಾಲಿಮಠ, ರಾಣೇಬೆನ್ನೂರಿನ ಸುಶೀಲ, ಮಲ್ಲಿಕಾರ್ಜುನ, ವಿನಯ ಅಂಗಡಿ, ಅನ್ವಿತಾ ಅಂಗಡಿ ಇದ್ದರು. ಇದಕ್ಕೂ ಮೊದಲು ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರು, ರೇಣುಕಾ ಚಾರ್ಯರು, ಮರುಳಸಿದ್ದೇಶ್ವರರ ಮೂರ್ತಿಗೆ ಅಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.