ADVERTISEMENT

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೈಲಿಗೆ ಹೋಗಬೇಕು: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:55 IST
Last Updated 5 ಜೂನ್ 2025, 13:55 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಕಾಲ್ತುಳಿತ ಪ್ರಕರಣಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯೇ ನೇರ ಹೊಣೆ. ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಅಲ್ಲು ಅರ್ಜುನ್ ರೀತಿಯಲ್ಲಿ ನೀವೇ ಜೈಲಿಗೆ ಹೋಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಸರ್ಕಾರ ಪ್ರಯೋಜಿತ ಹತ್ಯಾಕಾಂಡ. ಪ್ರಚಾರದ ಹಪಾಹಪಿತನದ ಸಾವು. ಕಾಗಕ್ಕ–ಗೂಬಕ್ಕನ ಕಥೆ ಹೇಳುವುದು ಬೇಡ. ಮ್ಯಾಜಿಸ್ಟ್ರೇಟ್ ತನಿಖೆ ಬೇಡ, ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಜನ ಸೇರುವುದು ಸರ್ಕಾರಕ್ಕೆ ಗೊತ್ತಿರಲಿಲ್ಲವೇ, ಅಧಿಕಾರಿಗಳು ಹೇಳಿದರೂ ನಿರ್ಲಕ್ಷ್ಯ ಮಾಡಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮೊದಲು ರಾಜೀನಾಮೆ ಕೊಟ್ಟು ನಂತರ ಮಾತನಾಡಿ. ಆರ್‌ಸಿಬಿ ಜತೆ ನಿಮ್ಮ ಮಕ್ಕಳು, ಮೊಮ್ಮಕ್ಕಳ ಫೋಟೊ ಬೇಕಾಗಿತ್ತು. ಅದಕ್ಕಾಗಿ ಬಡವರ ಮಕ್ಕಳ ಪ್ರಾಣ ಹೋಯಿತು’ ಎಂದರು.

ADVERTISEMENT

‘ವಿಧಾನಸೌಧದ ಮುಂದಿನ ವೇದಿಕೆ ನೋಡಿದರೆ ನಿಮ್ಮ ಯೋಗ್ಯತೆ ಗೊತ್ತಾಗುತ್ತದೆ. ಮಕ್ಕಳು-ಮೊಮ್ಮಕ್ಕಳನ್ನು ಕಳೆದುಕೊಂಡವರ ಶಾಪ ನಿಮಗೆ ತಟ್ಟುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿನಿತ್ಯ 8 ಕೋಟಿಯಿಂದ 10 ಕೋಟಿ ಜನ ಸೇರುತ್ತಿದ್ದರು. ವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಎರಡು ದಿನಗಳ ನಂತರ ಪೂರ್ವ ತಯಾರಿಯೊಂದಿಗೆ ಆಯೋಜಿಸಿದ್ದರೆ ಸಂಭ್ರಮಿಸಬಹುದಿತ್ತು. ಪ್ರಚಾರದ ಹಪಾಹಪಿತನಕ್ಕೆ ಬಡವರ ಮಕ್ಕಳ ಪ್ರಾಣ ಹೋಗಿದೆ. ಅವರ ಪ್ರಾಣವನ್ನು ಮುಖ್ಯಮಂತ್ರಿ ಮರಳಿ ತಂದು ಕೊಡುತ್ತಾರೆಯೇ’ ಎಂದು ಕೇಳಿದರು.

‘ಆರ್‌ಸಿಬಿ ಎಂದರೆ ಕರ್ನಾಟಕ ಸರ್ಕಾರ ಕಳುಹಿಸಿದ್ದ ತಂಡವಲ್ಲ, ಪ್ರಾಂಚೈಸಿ ನಮ್ಮದಲ್ಲ. ಆಟಗಾರರು ನಮ್ಮವರಲ್ಲ. ಆದರೂ ಅವರನ್ನು ಕರೆಸಿ ಸರ್ಕಾರದಿಂದ ಅಭಿನಂದನೆ ಮಾಡುವ ತುರ್ತು ಏನಿತ್ತು. ಇಡೀ ದುರಂತಕ್ಕೆ ಸರ್ಕಾರವೇ ನೇರ ಹೊಣೆ, ಇದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.