ಚಿಕ್ಕಮಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ನೆಟ್‌ವರ್ಕ್ ಇಲ್ಲದ 23 ಸಾವಿರ ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ಸಮೀಕ್ಷೆಯನ್ನು ಆನ್‌ಲೈನ್ ಆ್ಯಪ್ ಮೂಲಕ ಮಾಡಬೇಕಿದ್ದು, ಮಲೆನಾಡು ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದು, ಸಮೀಕ್ಷೆ ಕಷ್ಟವಾಗಬಹುದು. ಈ ಹಿಂದೆ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ವೇಳೆ ಆಗಿರುವ ತೊಂದರೆ ಗಮನದಲ್ಲಿ ಇರಿಸಿಕೊಂಡು ಸಮೀಕ್ಷೆ ಸುಗಮಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನೆಟ್‌ವರ್ಕ್ ಇಲ್ಲದ ಕುಟುಂಬಗಳಿಗಾಗಿ ಕ್ಯಾಂಪ್‌ಗಳನ್ನು ನಡೆಸಿ ಸಮೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ಸಮೀಪದಲ್ಲಿ ನೆಟ್‌ವರ್ಕ್ ಇರುವ ಸ್ಥಳಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಗುರುತಿಸಲಾಗಿದೆ. 73 ಕಡೆ ಈ ರೀತಿಯ ಕ್ಯಾಂಪ್‌ಗಳು ನಡೆಯಲಿವೆ. ಅಲ್ಲಿಗೆ ದಿನಕ್ಕೆ 5ರಿಂದ 10 ಕುಟುಂಬಗಳಿಗೆ ಸಮಯ ನಿಗದಿ ಮಾಡಿ ಕರೆಸಿಕೊಂಡು ಸಮೀಕ್ಷೆ ನಡೆಸಲಾಗುವುದು. ಶಿಬಿರ ನಡೆಸುವ ಸ್ಥಳದ ಬಗ್ಗೆ ಮೊದಲೇ ಆಯೋಗಕ್ಕೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಲಾಗುವುದು ಎಂದು ವಿವರಿಸಿದರು.
ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಕ್ರಮ ವಹಿಸಲಾಗಿದೆ. ಮೆಸ್ಕಾಂ ಮೀಟರ್ ರೀಡರ್‌ಗಳನ್ನು ಆಧರಿಸಿ 3.44 ಲಕ್ಷ ಕಟುಂಬಗಳನ್ನು ಜಿಯೊ ಟ್ಯಾಗ್ ಮಾಡಲಾಗಿದೆ. ಎಲ್ಲಾ ಮನೆಗಳಿಗೂ ಸ್ಟಿಕರ್ ಅಂಟಿಸಲಾಗಿದೆ. ವಿದ್ಯುತ್ ಮೀಟರ್ ಇಲ್ಲದ ಮನೆಗಳ ಸಮೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
2,668 ಸಿಬ್ಬಂದಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಕನಿಷ್ಠ 60 ಪ್ರಶ್ನೆಗಳನ್ನು ಸಿಬ್ಬಂದಿ ಕೇಳಲಿದ್ದಾರೆ. ಸಿಬ್ಬಂದಿಗೆ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ. ಪಡಿತರ ಚೀಟಿ ಹೊಂದಿರುವವರಿಗೆ ಈಗಾಗಲೇ ಇಕೆವೈಸಿ ಇದೆ. ಪಡಿತರ ಚೀಟಿ ಹೊಂದಿಲ್ಲದವರು ಆಧಾರ್ ಕಾರ್ಡ್ ನೀಡಬೇಕು. ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ದೂರವಾಣಿ ಸಂಖ್ಯೆಯನ್ನು ನೀಡಬೇಕು. ಆ ಸಂಖ್ಯೆಗೆ ಬರುವ ಒಟಿಪಿಯನ್ನು ಸಮೀಕ್ಷೆದಾರರಿಗೆ ತಿಳಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಉಪವಿಭಾಗಾಧಿಕಾರಿ ಸುದರ್ಶನ್ ಇದ್ದರು.
ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಸೆ.24ರಿಂದ ಮೂರು ದಿನ ಜಿಲ್ಲೆಯಲ್ಲಿ ಭೇಟಿ ನೀಡಲಿದ್ದು ಗ್ರಾಮ ಪಂಚಾಯಿತಿ ಮಟ್ಟದಿಂದ ಪ್ರಚಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಾರ್ವಜನಿಕ ಪ್ರಕಟಣೆ ಬ್ಯಾನರ್ ಅಳವಡಿಕೆ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಣೆ ಸ್ವಚ್ಛತಾ ಟಿಪ್ಪರ್‌ಗಳಲ್ಲಿ ಧ್ವನಿವರ್ಧಕಗಳ ಮೂಲಕವೂ ಪ್ರಚಾರ ಮಾಡಲಾಗುತ್ತಿದೆ. ಉಪಲೋಕಾಯುಕ್ತರನ್ನು ಪದೇ ಪದೇ ಭೇಟಿ ಮಾಡಿ ಅಹವಾಲು ಸಲ್ಲಿಸಲು ಆಗುವುದಿಲ್ಲ. ಅವರೇ ಜಿಲ್ಲೆಗೆ ಬರುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಅಹವಾಲು ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸೆ.24ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವರು. ಅಲ್ಲಿಯೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲಿದ್ದಾರೆ. ಸೆ.25ರಂದು ಬೆಳಿಗ್ಗೆ 9.45ರಿಂದ 10.45ರವರೆಗೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರೊಂದಿಗೆ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತು ಸಂವಾದ ನಡೆಸುವರು.
ಬಳಿಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಬಾಕಿ ಪ್ರಕರಣಗಳ ಕುರಿತು ಸಲ್ಲಿಕೆಯಾಗಿರುವ 84 ಪ್ರಕರಣಗಳ ಬಗ್ಗೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಲಿದ್ದಾರೆ. ಇದಕ್ಕೆ ಬೇಕಿರುವ ಎಲ್ಲಾ ತಯಾರಿಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ವಿವರಿಸಿದರು. ‘ಉಪಲೋಕಾಯುಕ್ತರ ಜತೆಗೆ ನಾಲ್ವರು ನ್ಯಾಯಾಧೀಶರ ತಂಡ ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಬಸ್ ನಿಲ್ದಾಣ ಆಸ್ಪತ್ರೆ ಸೇರಿ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ. ಯಾವ ಸ್ಥಳಕ್ಕೆ ಭೇಟಿ ನೀಡುವರು ಎಂಬ ಮಾಹಿತಿಯನ್ನೂ ನಮಗೂ ತಿಳಿಸಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.