ADVERTISEMENT

ಚಿಕ್ಕಮಗಳೂರು: ಜೇನು ನೊಣಗಳ ಮಾರಣ ಹೋಮ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 22:48 IST
Last Updated 20 ನವೆಂಬರ್ 2025, 22:48 IST
ವೈದ್ಯಕೀಯ ಕಾಲೇಜಿನ ಬಳಿ ಮೃತ ಜೇನುನೊಣಗಳು ಬಿದ್ದಿರುವುದು
ವೈದ್ಯಕೀಯ ಕಾಲೇಜಿನ ಬಳಿ ಮೃತ ಜೇನುನೊಣಗಳು ಬಿದ್ದಿರುವುದು   

ಚಿಕ್ಕಮಗಳೂರು: ಇಲ್ಲಿಯ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡದಲ್ಲಿ ಕಟ್ಟಿದ್ದ ಹತ್ತಾರು ಜೇನುಗೂಡುಗಳನ್ನು ತೆರವುಗೊಳಿಸಿದ್ದು, ಲಕ್ಷಾಂತರ ಜೇನುನೊಣಗಳ ಮಾರಣಹೋಮ ನಡೆದಿದೆ.

ವೈದ್ಯಕೀಯ ಕಾಲೇಜು ಬೋಧಕ ಕೊಠಡಿ, ವಿದ್ಯಾರ್ಥಿ, ವಿದ್ಯಾರ್ಥಿ ನಿಲಯಗಳ ಕಟ್ಟಡದಲ್ಲಿ 83ಕ್ಕೂ ಹೆಚ್ಚು ಜೇನುಗೂಡು ಕಟ್ಟಿದ್ದವು. ಕಟ್ಟಡಗಳಿಗೆ ಸರಿಯಾಗಿ ಮೆಶ್ ಅಳವಡಿಸದ ಕಾರಣ ಜೇನು ನೋಣಗಳು ವಸತಿ ನಿಲಯಗಳ ಒಳಗೆ ಹೋಗುತ್ತಿದ್ದವು. 

ವಿದ್ಯಾರ್ಥಿಗಳು ಭಯದಲ್ಲಿದ್ದಾರೆ ಎಂದು ಪೋಷಕರು ದೂರಿದ್ದರು. ಜೇನುಗೂಡು ತೆರವುಗೊಳಿಸಲು ವೈದ್ಯಕೀಯ ಕಾಲೇಜಿನಿಂದ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಕಾಲೇಜು ಕಟ್ಟಡದಲ್ಲಿ 84 ಗೂಡುಗಳಿದ್ದು, ತೆರವುಗೊಳಿಸಲು  ಒಂದು ಗೂಡಿಗೆ ತಲಾ ₹1 ಸಾವಿರ ನೀಡಲಾಗಿದೆ. ಜೇನುತುಪ್ಪ ಕೂಡ ಅವರಿಗೇ ಎಂಬ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೇನುನೊಣಗಳು ಲಕ್ಷಾಂತರ ಸಂಖ್ಯೆಯಲ್ಲಿ ಮೃತಪಟ್ಟಿದ್ದು, ಕಾಲೇಜಿನ ಆವರಣದಲ್ಲಿ ಅಲ್ಲಲ್ಲಿ ರಾಶಿ ಬಿದ್ದಿವೆ. 

ADVERTISEMENT

‘ರಾಸಾಯನಿಕ ಸಿಂಪರಣೆ ಮಾಡುವ ಮೂಲಕ ಅವೈಜ್ಞಾನಿಕವಾಗಿ ಗೂಡು ತೆರವುಗೊಳಿಸಲಾಗುತ್ತಿದೆ. ಇದರಿಂದ ನೊಣಗಳ ಮಾರಣಹೋಮ ನಡೆದಿದೆ’ ಎಂದು ಪರಿಸರಾಸಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಕಾಲೇಜಿನ ಡೀನ್ ಹರೀಶ್, ‘ತೆರವುಗೊಳಿಸಲು ಗುತ್ತಿಗೆ ನೀಡಲಾಗಿದೆ. ಯಾವ ರೀತಿ ತೆರವುಗೊಳಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ತೆರವುಗೊಳಿಸಲು ತೀರ್ಮಾನಿಸಲಾಯಿತು. ಪರಿಸರ ಪ್ರೇಮಿಗಳು ಕರೆ ಮಾಡಿ ಅವುಗಳಿಂದ ಏನು ತೊಂದರೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಡಿಯೊ ಕೂಡ ಕಳುಹಿಸಿದ್ದಾರೆ. ಪ್ರಾತ್ಯಕ್ಷಿಕೆ ಮೂಲಕ ವಿಡಿಯೊ ತೋರಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.