ADVERTISEMENT

ಚಿಕ್ಕಮಗಳೂರು: ₹8.96 ಕೋಟಿ ಕಾಮಗಾರಿಗೆ ಅನುಮೋದನೆ

ನಗರಸಭೆ ವಿಶೇಷ ಸಾಮಾನ್ಯ ಸಭೆ, ಆಡಳಿತ ಸದಸ್ಯರ ಗೈರು

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:47 IST
Last Updated 14 ಮೇ 2025, 15:47 IST
ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಹಂಗಾಮಿ ಆಯುಕ್ತ ಲೋಕೇಶ್, ಉಪಾಧ್ಯಕ್ಷೆ ಅನು ಮಧುಕರ್ ಹಾಜರಿದ್ದರು
ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಹಂಗಾಮಿ ಆಯುಕ್ತ ಲೋಕೇಶ್, ಉಪಾಧ್ಯಕ್ಷೆ ಅನು ಮಧುಕರ್ ಹಾಜರಿದ್ದರು   

ಚಿಕ್ಕಮಗಳೂರು: ಎಸ್‌ಎಫ್‌ಸಿ ಮತ್ತು ನಗರಸಭೆ ನಿಧಿಯಡಿ ₹8.96 ಕೋಟಿ ಮೊತ್ತದ ಕಾಮಗಾರಿಗಳಿಗೆ ಆಡಳಿತ ಪಕ್ಷದ ಬಹುತೇಕ ಸದಸ್ಯರ ಗೈರು ಹಾಜರಿಯ ನಡುವೆ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರಕಿತು.

ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಬುಧವಾರ ನಡೆಯಿತು. ಕಾಮಗಾರಿಗಳ ಪಟ್ಟಿಗೆ ಸಭೆ ಅನುಮೋದಿಸಿತು.

ಆಡಳಿತ ಪಕ್ಷದ ಬಿಜೆಪಿಯ 17 ಸದಸ್ಯರ ಪೈಕಿ ಆರಂಭದಲ್ಲಿ 6 ಸದಸ್ಯರು, ವಿರೋಧ ಪಕ್ಷಗಳ ಬಹುತೇಕ ಸದಸ್ಯರು ಹಾಜರಿದ್ದರು. ‘ವಿವಿಧ ಕಾಮಗಾರಿಗಳ ಅನುಮೋದನೆಗೆ ಕರೆದಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಬಹುತೇಕ ಕಾಮಗಾರಿಗಳು ಆಡಳಿತ ಪಕ್ಷದ ಸದಸ್ಯರ ವಾರ್ಡ್‌ಗಳಲ್ಲಿವೆ. ಇವುಗಳು ಅನುಮೋದನೆ ನೀಡಲು ನಾವೇಕೆ ಸಭೆಗೆ ಹಾಜರಾಗಬೇಕು’ ಎಂದು ಪ್ರಶ್ನಿಸಿದ ಕಾಂಗ್ರೆಸ್ ಸದಸ್ಯರು ಹೊರ ನಡೆದರು.

ADVERTISEMENT

ಕೋರಂ(ಸದಸ್ಯ ಬಲ) ಅಭಾವ ಇರುವುದರಿಂದ ಸಭೆ ಆರಂಭಿಸಲು ಸಾಧ್ಯವಾಗದೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮತ್ತು ಉಪಾಧ್ಯಕ್ಷೆ ಅನು ಮಧುಕರ್ ವೇದಿಕೆಯಲ್ಲಿ ಕುಳಿತಿದ್ದರು. ಹಂಗಾಮಿ ಆಯುಕ್ತರಾಗಿರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಲೋಕೇಶ್ ಅವರು ಕಾಂಗ್ರೆಸ್ ಸದಸ್ಯರ ಮನವೊಲಿಸಿ ವಾಪಸ್ ಕರೆ ತಂದರು. ಬಳಿಕ ಸಭೆ ಆರಂಭವಾಯಿತು. 

‘ವಿಶೇಷ ಸಾಮಾನ್ಯ ಸಭೆಯ ಅಜೆಂಡಾವನ್ನು ಸದಸ್ಯರಿಗೆ ಮೂರು ದಿನ ಮುಂಚಿತವಾಗಿಯೇ ನೀಡಬೇಕು. ಆದರೆ, ಎಲ್ಲರಿಗೂ ಮಂಗಳವಾರ ಸಂಜೆ ದೊರಕಿದೆ. ಅಜೆಂಡಾದಲ್ಲಿ ಏನಿದೆ ಎಂಬುದನ್ನು ಓದಲು ಸಹ ಸಾಧ್ಯವಾಗಿಲ್ಲ. ಸಭೆ ಮುಂದೂಡಬೇಕು’ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. 

‘ಮಳೆಯ ಕಾರಣದಿಂದ ಸಭೆಯ ಅಜೆಂಡಾಗಳನ್ನು ಸದಸ್ಯರ ಮನೆಗಳಿಗೆ ತಲುಪಿಸುವುದು ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು. ಸಭೆ ಮುಂದುವರಿಸಲು ಅನುವು ಮಾಡಬೇಕು’ ಎಂದು ಲೋಕೇಶ್ ಮನವಿ ಮಾಡಿದರು.

‘ಅಜೆಂಡದಲ್ಲಿ ಇರುವ ಕಾಮಗಾರಿಗಳ ಪಟ್ಟಿ ಗಮನಿಸಿದರೆ ಬಹುತೇಕ ಎಲ್ಲವೂ ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಲ್ಲಿ ಇವೆ. ಆದರೆ, ಅದೇ ಸದಸ್ಯರು ಸಭೆಗೆ ಹಾಜರಾಗಿಲ್ಲ. ಆಡಳಿತ ಪಕ್ಷದ ಸದಸ್ಯರ ಬೆಂಬಲವೇ ಇಲ್ಲದಿರುವುದರಿಂದ ಅಧ್ಯಕ್ಷರು ರಾಜೀನಾಮೆ ನೀಡಬೇಕು’ ಎಂದು ವರಸಿದ್ಧಿ ವೇಣುಗೋಪಾಲ್ ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದರು.

‘ಆಡಳಿತ ಪಕ್ಷದ ಸದಸ್ಯರ ಬೆಂಬಲ ಇದೆ. ಸಭೆಯ ಅಜೆಂಡಾ ಮಂಗಳವಾರ ತಲುಪಿರುವುದರಿಂದ ಸಭೆಯ ಮಾಹಿತಿ ಇಲ್ಲದೆ ಸದಸ್ಯರು ಮಧುವೆ, ಸಂಬಂಧಿಕರ ಸಾವು ಸೇರಿ ಬೇರೆ ಬೇರೆ ಕಡೆ ಹೋಗಿದ್ದಾರೆ. ಆದ್ದರಿಂದ ಸಭೆಯಲ್ಲಿ ಭಾಗವಹಿಸಲು ಆಗಿಲ್ಲ’ ಎಂದು ಸುಜಾತಾ ಶಿವಕುಮಾರ್ ಸ್ಪಷ್ಟಪಡಿಸಿದರು.

ಹೊಸಮನೆ ಕೆಳಭಾಗದ ಚಾನಲ್ ರಸ್ತೆ ಏರಿ ಪಕ್ಕದಲ್ಲಿ ಚೈನ್‌ಲಿಂಕ್ ಬೇಲಿ ಅಭಿವೃದ್ಧಿಪಡಿಸುವ ₹14.46 ಲಕ್ಷ ಮೊತ್ತದ ಕಾಮಗಾರಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಹಲವು ಉದ್ಯಾನಗಳಿಗೆ ಬೇಲಿ ಇಲ್ಲ. ಏರಿಯ ಪಕ್ಕದಲ್ಲಿ ಚೈನ್‌ಲಿಂಕ್ ಬೇಲಿ ಏಕೆ ಬೇಕು. ಈ ಕಾಮಗಾರಿಯನ್ನು ತಡೆ ಹಿಡಿಯಬೇಕು. 1ರಿಂದ 35 ವಾರ್ಡ್‌ಗಳಲ್ಲಿ ಡೆಕ್‌ ಸ್ಲ್ಯಾಬ್ ನಿರ್ಮಾಣಕ್ಕೆ ನಿಗದಿ ಮಾಡಿರುವ ₹41.80 ಲಕ್ಷ ಮೊದತ್ತ ಕಾಮಗಾರಿ ಪಟ್ಟಿಯಲ್ಲಿದೆ. ಈ ಹಿಂದೆಯೂ ಕೂಡ ಇದೇ ರೀತಿ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ. ಆದರೆ, ಯಾವ ವಾರ್ಡ್‌ನಲ್ಲಿ ನಿರ್ಮಾಣವಾಗಿವೆ ಎಂಬ ಮಾಹಿತಿ ನೀಡಬೇಕು’ ಎಂದು ಪಟ್ಟು ಹಿಡಿದರು.

‘ಕಟ್ಟಡ ಯೋಜನೆ ಉಲ್ಲಂಘಿಸಿದ್ದರೆ ಒ.ಸಿ ಇಲ್ಲ’

ಮಂಜೂರಾದ ಕಟ್ಟಡ ಯೋಜನೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರೆ ಅಂತಹ ಮನೆಗಳ ಮಾಲೀಕರಿಗೆ ಸ್ವಾಧೀನಾನುಭವ ಪತ್ರ (ಒ.ಸಿ) ನೀಡುವುದಿಲ್ಲ ಎಂದು ಹಂಗಾಮಿ ಆಯುಕ್ತ ಲೋಕೇಶ್ ತಿಳಿಸಿದರು. ‘ಒ.ಸಿ ನೀಡದಿರುವುದರಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾವಿರಾರು ಮನೆಗಳ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಒ.ಸಿ ನೀಡಲು ಏನು ತೊಂದರೆ’ ಎಂದು ಸದಸ್ಯರು ಪ್ರಶ್ನಿಸಿದರು.  ‘ಕಟ್ಟಡ ಯೋಜನೆ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗಿದ್ದರೆ ಯಾವುದೇ ಕಾರಣಕ್ಕೂ ಒ.ಸಿ ನೀಡಬಾರದು ಎಂಬ ಸುಪ್ರೀಂ ಕೋರ್ಟ್‌ ನಿರ್ದೇಶನವಿದೆ. ಆದ್ದರಿಂದ ಅಂತಹ ಕಟ್ಟಡಗಳಿಗೆ ಒ.ಸಿ ನೀಡುತ್ತಿಲ್ಲ. ಒಂದು ವೇಳೆ ಕಣ್ತಪ್ಪಿಸಿ ಅನುಮತಿ ನೀಡಿದರೆ ಅಂತಹ ಸಿಬ್ಬಂದಿ ವಿರುದ್ಧ ನ್ಯಾಯಾಲಯದ ಆದೇಶದಂತೆ ಕ್ರಮವಾಗಲಿದೆ’ ಎಂದು ಹೇಳಿದರು.

ಹಣ ಕೊಟ್ಟರೆ ಮಾತ್ರ ಚಲನ್: ಆರೋಪ

ಆಸ್ತಿ ತೆರಿಗೆ ಪಾವತಿಸಲು ಬರುವ ಜನ ಲಂಚ ಕೊಟ್ಟು ಚಲನ್ ತೆಗದುಕೊಳ್ಳಬೇಕಾದ ಸ್ಥಿತಿ ಇದೆ. ಹಣ ಕೊಟ್ಟವರಿಗೆ ಮಾತ್ರ ಚಲನ್ ಸಿಗುತ್ತಿದೆ. ಸದಸ್ಯರೇ ಬಂದರೂ ಗಂಟೆ ಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಆಸ್ತಿ ತೆರಿಗೆ ಪಾವತಿಸಲು ಜನ ಕಚೇರಿಗೆ ಬರುವುದೇ ಹೆಚ್ಚು. ಅವರನ್ನು ಕಾಯಿಸಿ ತೆರಿಗೆ ಪಾವತಿಸಲು ಹಿಂದೇಟು ಹಾಕುವಂತೆ ಮಾಡಲಾಗುತ್ತಿದೆ ಎಂದು ಸದಸ್ಯ ವರಸಿದ್ಧಿ ವೇಣುಗೋಪಾಲ್ ಆರೋಪಿಸಿದರು. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ‘ನಗರೋತ್ಥನ ಯೋಜನೆಯಡಿ ಟೆಂಡರ್ ಪೂರ್ಣಗೊಂಡು 30 ತಿಂಗಳಾಗಿದೆ. ಈವರೆಗೆ ಕಾಮಗಾರಿ ನಿರ್ವಹಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಗರಕ್ಕೆ ಇದೇ 18ರಂದು ಭೇಟಿ ನೀಡುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.