ADVERTISEMENT

ಚಿಕ್ಕಮಗಳೂರು | ಕಂದಾಯ, ಅರಣ್ಯ ಭೂಮಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಕೋಟ

ರೈತರ ಸಮಾವೇಶದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:23 IST
Last Updated 30 ಆಗಸ್ಟ್ 2025, 7:23 IST
ಹಂಗರವಳ್ಳಿಯಲ್ಲಿ ಆವತಿ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ಗುರುವಾರ ನಡೆಯಿತು
ಹಂಗರವಳ್ಳಿಯಲ್ಲಿ ಆವತಿ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ಗುರುವಾರ ನಡೆಯಿತು   

ಚಿಕ್ಕಮಗಳೂರು: ಜಿಲ್ಲೆಯ ಕಂದಾಯ ಮತ್ತು ಅರಣ್ಯ ಭೂಮಿ ಸಮಸ್ಯೆ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಸಂಬಂಧ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾದ ಸಭೆ ಕರೆಯಲು ಪ್ರಯತ್ನಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹಂಗರವಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ಆವತಿ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಂದಾಯ ಮತ್ತು ಅರಣ್ಯ ಭೂಮಿ ಸಮಸ್ಯೆಗಳಲ್ಲಿ ಕೆಲವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಮತ್ತೆ ಕೆಲವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಎರಡೂ ಸರ್ಕಾರಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಕುಳಿತು ಮುಂದಿನ ತಲೆಮಾರಿಗೆ ಅನುಕೂಲ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಈ ಸಮಸ್ಯೆಗಳಿಗೆ ಮುಕ್ತಿ ದೊರೆಯುವುದಿಲ್ಲ ಎಂದರು.

ADVERTISEMENT

ಸರ್ಫೇಸಿ ಕಾಯ್ದೆಯಿಂದ ಕಾಫಿ ಹೊರಗಿಡಬೇಕು ಎಂಬ ಪ್ರಯತ್ನ ನಡೆದಿದೆ. ಒಂದು ಪ್ಯಾಕೇಜ್ ಕೊಡಿಸುವ ಮೂಲಕ ಅನೇಕ ಬೆಳೆಗಾರರಿಗೆ ಅನುಕೂಲ ಆಗಿದೆ. ಒಟ್ಟಾರೆ ಜಿಲ್ಲೆಯ ಸಮಸ್ಯೆಗಳನ್ನು ಪಕ್ಷಾತೀತವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಮಾತನಾಡಿ, ‘ಕಾಫಿ ಧಾರಣೆ ಮತ್ತಿತರೆ ವಿದ್ಯಮಾನಗಳ ಬಗ್ಗೆ ಬೆಳೆಗಾರರು ಮಂಡಳಿ ಆಯೋಜಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅರಿವು ಮೂಡಿಸಿಕೊಳ್ಳಬೇಕು. ಸರ್ಫೇಸಿ ಕಾಯ್ದೆಯಿಂದ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಂದ್ರ ಹಣಕಾಸು ಸಚಿವರು, ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿದ್ದೇವೆ. ಅವರಿಗೆ ಮನವರಿಕೆ ಮಾಡಿದ್ದೇವೆ’ ಎಂದರು.

ಜಿಲ್ಲಾ ನಾಗರಿಕ ರೈತ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಮಾತನಾಡಿ, ‘ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ನೂರಾರು ರೈತರು ಕಾಯುತ್ತಿದ್ದಾರೆ. ಆದರೆ, ಪ್ಲಾಂಟೇಷನ್ ಜಮೀನು ಮಂಜೂರಿಗೆ ಅವಕಾಶ ಇಲ್ಲ ಎಂದು ಸರ್ಕಾರ ಹೇಳಿದೆ. ಇದರಿಂದ ನೂರಾರು ಅರ್ಜಿಗಳು ಈಗಾಗಲೇ ವಜಾಗೊಂಡಿವೆ. ಈ ಸಮಸ್ಯೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಪರಿಹಾರ ಹುಡುಕಬೇಕು’ ಎಂದು ಮನವಿ ಮಾಡಿದರು.

ಆವತಿ ಹೋಬಳಿ ಒಂದರಲ್ಲೇ ಮೂರುವರೆ ಸಾವಿರ ಹೆಕ್ಟೇರ್ ಡೀಮ್ಡ್ ಅರಣ್ಯ ಇದೆ. ಸಮಾವೇಶದಲ್ಲಿ ಭಾಗವಹಿಸಿರುವ ಪ್ರತಿ ಬೆಳೆಗಾರನೂ ಹೋರಾಟದ ಕಿಚ್ಚು ಬೆಳೆಸಿಕೊಂಡರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಬೈಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರುಣಕುಮಾರ್, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್‌ಕುಮಾರ್, ದಯಾಕರ್, ಶ್ರೀಧರ್, ಮಹೇಂದ್ರ, ದೀಪಕ್ ದೊಡ್ಡಯ್ಯ, ಕೆರಮಕ್ಕಿ ಮಹೇಶ್, ತುಳಸೇಗೌಡ, ರಾಜು, ದಿಲೀಪ್, ಮೈಲಿಮನೆ ಪೂರ್ಣೇಶ್‌ ಭಾಗವಹಿಸಿದ್ದರು.

ಆವತಿ ಹೋಬಳಿ ಒಂದರಲ್ಲೇ ಮೂರುವರೆ ಸಾವಿರ ಹೆಕ್ಟೇರ್ ಡೀಮ್ಡ್ ಅರಣ್ಯ ‘ಜಿಲ್ಲೆಯ ಸಮಸ್ಯೆಯನ್ನು ಪಕ್ಷಾತೀತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.