ADVERTISEMENT

ಚಿಕ್ಕಮಗಳೂರು: ಮುಂಗಾರು ಪೂರ್ವ ಮಳೆಗೆ ಚಂದ್ರದ್ರೋಣ ಪರ್ವತಕ್ಕೆ ಜೀವಕಳೆ

ಎಲ್ಲೆಲ್ಲೂ ಹಸಿರು, ಜಲಪಾತಗಳಲ್ಲಿ ಜೀವಜಲ

ವಿಜಯಕುಮಾರ್ ಎಸ್.ಕೆ.
Published 29 ಮೇ 2024, 5:45 IST
Last Updated 29 ಮೇ 2024, 5:45 IST
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಸಾಲು ಹಸಿರಿನಿಂದ ಕಂಗೊಳಿಸುತ್ತಿರುವುದು  –ಪ್ರಜಾವಾಣಿ ಚಿತ್ರಗಳು/ಎ.ಎನ್.ಮೂರ್ತಿ
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಸಾಲು ಹಸಿರಿನಿಂದ ಕಂಗೊಳಿಸುತ್ತಿರುವುದು  –ಪ್ರಜಾವಾಣಿ ಚಿತ್ರಗಳು/ಎ.ಎನ್.ಮೂರ್ತಿ   

ಚಿಕ್ಕಮಗಳೂರು: ಬೇಸಿಗೆಯ ಬಿಸಿಲಿನಲ್ಲಿ ಬಣಗುಡುತ್ತಿದ್ದ ಚಂದ್ರದ್ರೋಣ ಪರ್ವತ ಈಗ ಮುಂಗಾರು ಪೂರ್ವ ಮಳೆಯಿಂದ ಹಸಿರು ಹೊದ್ದು ಕಂಗೊಳಿಸುತ್ತಿದೆ. ಮಳೆ ಬಿದ್ದ ಬಳಿಕ ಇಡೀ ಗಿರಿಶ್ರೇಣಿಗೆ ಜೀವಕಳೆ ಬಂದಂತಾಗಿದೆ.

ಬೋಳು ಗುಡ್ಡಗಳಲ್ಲಿ ಹಸಿರು ಚಿಗುರೊಡೆದಿದೆ. ಜಲಪಾತಗಳಲ್ಲಿ ನೀರು ಹರಿಯಲಾರಂಭಿಸಿದ್ದು, ಕಾಣೆಯಾಗಿದ್ದ ಮೋಡಗಳು ಆಗಾಗ ಬಂದು ಗಿರಿ ಸಾಲುಗಳಿಗೆ ಮುತ್ತಿಕ್ಕುತ್ತಿವೆ. ಬಿಸಿಲ ಬೇಗೆಯಲ್ಲಿ ಬೆಂದಿದ್ದ ಜನರ ಕಣ್ಣಿಗೆ ಹಸಿರು ರಾಶಿ ಮುದ ನೀಡುತ್ತಿದೆ. ಬಿಸಿಲೂ ಇಲ್ಲದೆ, ಮಳೆಯೂ ಇಲ್ಲದ ಮೋಡ ಕವಿದ ವಾತಾವರಣದಲ್ಲಿ ಸಂಪೂರ್ಣ ಹಸಿರಾಗಿರುವ ಗಿರಿಗಳನ್ನು ಕಂಡು ಪ್ರವಾಸಿಗರ ಬೆರಗಾಗುತ್ತಿದ್ದಾರೆ.

ರಾಜ್ಯದ ಅತಿ ಎತ್ತರ ಶಿಖರವಾಗಿರುವ ಮುಳ್ಳಯ್ಯನಗಿರಿ ಮೋಡದಲ್ಲಿ ಆಗಾಗ ಮುಳುಗುತ್ತಿದೆ. ಬಾಬಾ ಬುಡನ್‌ ಗಿರಿ, ಗಾಳಿಕೆರೆ, ದೇವಿರಮ್ಮ ಬೆಟ್ಟ, ಕೆಮ್ಮಣ್ಣುಗುಂಡಿ, ಎತ್ತಿನಭುಜ, ದೇವರಮನೆ, ಕುದುರೆಮುಖ, ಚಾರ್ಮಾಡಿ ಘಾಟಿಯಲ್ಲಿನ ಗಿರಿ ಶ್ರೇಣಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಾಣಿಕ್ಯಧಾರ, ಝರಿಫಾಲ್ಸ್, ಹೊನ್ನಮ್ಮನಹಳ್ಳ, ಕಲ್ಲತ್ತಗಿರಿ, ಹೆಬ್ಬೆ, ಸಿರಿಮನೆ ಜಲಪಾತಗಳಲ್ಲಿ ನೀರು ಹರಿಯಲಾರಂಭಿಸಿದೆ.

ADVERTISEMENT

ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಸಿಗರು ದಂಡು ದಂಡಾಗಿ ದಾಂಗುಡಿ ಇಡುತ್ತಿದ್ದಾರೆ. ಗಿರಿಶ್ರೇಣಿಯ ರಸ್ತೆ ಬದಿಯಲ್ಲಿ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಹಸಿರಿನಲ್ಲಿ ಕುಣಿದಾಡಿ ಸೌಂದರ್ಯ ಸವಿಯುತ್ತಿದ್ದಾರೆ. ಆಗಾಗ ಬಂದು ಹೋಗುವ ಮೋಡಗಳು, ತಣ್ಣನೆ ಬೀಸುವ ಗಾಳಿಯ ನಡುವೆ ಓಡಾಡಿ ಮನ ತಂಪು ಮಾಡಿಕೊಳ್ಳುತ್ತಿದ್ದಾರೆ. 

ಪೂರ್ವ ಮುಂಗಾರು ಸುರಿದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಜೀವಕಳೆ ಬಂದಿರುವುದು –ಪ್ರಜಾವಾಣಿ ಚಿತ್ರಗಳು/ಎ.ಎನ್.ಮೂರ್ತಿ
ಗಿರಿಶ್ರೇಣಿಯ ಮೇಲಿರುವ ಗಾಳಿಕೆರೆ ತುಂಬಿರುವುದು –ಪ್ರಜಾವಾಣಿ ಚಿತ್ರಗಳು/ಎ.ಎನ್.ಮೂರ್ತಿ

ವನ್ಯಜೀವಿಗಳು ನಿಟ್ಟುಸಿರು

ಭದ್ರಾ ಅಭಯಾರಣ್ಯದಲ್ಲಿ ನದಿ ಹಳ್ಳ ತೊರೆಗಳಲ್ಲಿ ನೀರು ಹರಿಯುತ್ತಿದ್ದು ವನ್ಯಜೀವಿಗಳ ನೀರಿನ ದಾಹವೂ ತೀರಿದಂತಾಗಿದೆ. ಭದ್ರಾ ಹೇಮಾವತಿ ತುಂಗಾ ನದಿಗಳಲ್ಲಿ ನೀರಿನ ಹರಿವಿದ್ದು ಜಲಾಶಯಗಳತ್ತ ಸಣ್ಣದಾಗಿ ನೀರು ಸಾಗುತ್ತಿದೆ.  ಅಭಯಾರಣ್ಯವು ಭದ್ರಾ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ಇದ್ದು ನೀರು ಹೆಚ್ಚಾಗುತ್ತಿರುವುದು ಸಮಾಧಾನ ತಂದಿದೆ. ಅರಣ್ಯದೊಳಗೆ ಅಲ್ಲಲ್ಲಿ ಇರುವ ಕೆರೆ–ಕಟ್ಟೆಗಳೂ ತುಂಬಿದ್ದು ವನ್ಯಜೀವಿಗಳ ನೀರಿನ ತೊಂದರೆಯನ್ನು ಮಳೆ ನೀಗಿಸಿದೆ.

ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ

ಕಾಫಿನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಸರ ಪ್ರವಾಸಕ್ಕೆ ಇತ್ತೀಚಿನ ದಿನಗಳಲ್ಲಿ ಜನ ಆಕರ್ಷಿತರಾಗುತ್ತಿದ್ದಾರೆ. ಆತಿಥ್ಯ ನೀಡಲು ಹೋಮ್‌ಸ್ಟೇ ಮತ್ತು ರೆಸಾರ್ಟ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. 2022ರಲ್ಲಿ 60.73 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರೆ 2023ರಲ್ಲಿ ಈ ಸಂಖ್ಯೆ 79.17 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ 19 ಲಕ್ಷ ಪ್ರವಾಸಿಗರು ಹೆಚ್ಚುವರಿಯಾಗಿ ಭೇಟಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.