ADVERTISEMENT

ಕಳಸ: ಮುಂಡುಗದಮನೆಗೆ ಅವಳಿ ಸೇತುವೆ ಭಾಗ್ಯ!

ಒಂದರ ಪಕ್ಕ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಹಲವರ ಆಕ್ಷೇಪ

ರವಿ ಕೆಳಂಗಡಿ
Published 19 ಮಾರ್ಚ್ 2023, 7:59 IST
Last Updated 19 ಮಾರ್ಚ್ 2023, 7:59 IST
ಕಳಸ ತಾಲ್ಲೂಕಿನ ಮುಂಡುಗದಮನೆ ಬಳಿ ಒಂದು ಸೇತುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿ ಇರುವಾಗಲೇ ಪಕ್ಕದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಆರಂಭವಾಗಿರುವುದು.
ಕಳಸ ತಾಲ್ಲೂಕಿನ ಮುಂಡುಗದಮನೆ ಬಳಿ ಒಂದು ಸೇತುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿ ಇರುವಾಗಲೇ ಪಕ್ಕದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಆರಂಭವಾಗಿರುವುದು.   

ಕಳಸ: ಮಲೆನಾಡು ಭಾಗದ ಹಲವಾರು ಗ್ರಾಮಗಳ ಜನರು ಮಳೆಗಾಲದಲ್ಲಿ ದ್ವೀಪದಂತಹ ಸ್ಥಿತಿಯಿಂದ ನರಳುತ್ತಾ ಸೇತುವೆಗಾಗಿ ದಶಕಗಳಿಂದ ಅಂಗಲಾಚುತ್ತಲೇ ಇದ್ದಾರೆ. ಈ ಮಧ್ಯೆ ಹೊರನಾಡು ಗ್ರಾಮದ ಮುಂಡುಗದ ಮನೆ ಗ್ರಾಮದಲ್ಲಿ ಅಕ್ಕಪಕ್ಕದಲ್ಲೇ 2 ಸೇತುವೆಗಳ ಕಾಮಗಾರಿಗಳು ನಡೆಯುತ್ತಿರುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.

2018ರಲ್ಲಿ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರ ₹ 35 ಲಕ್ಷ ಅನುದಾನದಲ್ಲಿ ಮುಂಡುಗದಮನೆ ಹಳ್ಳಕ್ಕೆ ಸೇತುವೆ ಕಾಮಗಾರಿ ಆರಂಭವಾಗಿತ್ತು. 5 ವರ್ಷ ಕಳೆದರೂ ಈ ಕಾಮಗಾರಿ ಕುಂಟುತ್ತಾ ಸಾಗಿ, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಆ ಸೇತುವೆಯು ಮುಕ್ತಾಯದ ಹಂತಕ್ಕೆ ಬಂದಿದೆ. ಅದೇ ಸೇತುವೆಯ ಬಗುಲ್ಲಲೇ ₹ 2 ಕೋಟಿ ವೆಚ್ಚದಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಕೆಲಸ ಆರಂಭಿಸಿದೆ. ಮಾರ್ಚ್ ಅಂತ್ಯದ ಒಳಗೆ ಸಾಧ್ಯವಾದಷ್ಟು ಕಾಮಗಾರಿ ನಡೆಸುವ ತರಾತುರಿಯು ಕಂಡುಬರುತ್ತಿದೆ.

‘20 ಮನೆ ಇರುವ ಮುಂಡುಗದ ಮನೆ ಪ್ರದೇಶಕ್ಕೆ 2 ಸೇತುವೆ ಮಾಡುವ ಬದಲು ಮುಂಡುಗದಮನೆ, ಕೆಸುವಿನಕೊಂಡ ಮೂಲಕ ಚಿಕ್ಕನ ಕೊಡಿಗೆ ಸಂಪರ್ಕದ ರಸ್ತೆ ಕಾಮಗಾರಿ ನಡೆಸಬಹುದುತ್ತು.ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದರೂ ನಮ್ಮ ಸಲಹೆ ಸ್ವೀಕಾರ ಮಾಡಿಲ್ಲ’ ಎಂದು ಹೊರನಾಡು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ರಾಮು ಬೇಸರದಿಂದ ಹೇಳುತ್ತಾರೆ.

ADVERTISEMENT

‘ಒಂದೇ ಹಳ್ಳಕ್ಕೆ 2 ಸೇತುವೆ ಮಾಡುತ್ತಿರುವುದು ಸರ್ಕಾರದ ಹಣ ಪೋಲು ಮಾಡುವ ಉದ್ದೇಶ. ಹಣ ದೋಚುವ ಹುನ್ನಾರ. ಈ ಕಾಮಗಾರಿ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದು ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಹೇಳುತ್ತಾರೆ.

ಈಗಾಗಲೇ ನಿರ್ಮಾಣ ಆಗಿರುವ ಸೇತುವೆಗಿಂತ ಎತ್ತರದಲ್ಲಿ ಮತ್ತು ಅಗಲವಾಗಿ ಹೊಸ ಸೇತುವೆ ನಿರ್ಮಾಣ ಆಗುತ್ತದೆ ಎಂಬುದು ಮುಂಡುಗದಮನೆ ನಿವಾಸಿಗಳಿಗೆ ದುಪ್ಪಟ್ಟು ಖುಷಿ ತಂದಿದೆ. ಆದರೆ, ಈ ಜೋಡಿ ಸೇತುವೆಗಳ ಬಗ್ಗೆ ಕಳಸ ತಾಲ್ಲೂಕಿನಾದ್ಯಂತ ಎದ್ದಿರುವ ಅಸಮಾಧಾನ ಕೂಡ ದುಪ್ಪಟ್ಟೇ ಆಗಿದೆ.

‘ಈಗಾಗಲೇ ನಿರ್ಮಾಣ ಆಗಿರುವ ಮೊದಲ ಸೇತುವೆಯ ಬಗ್ಗೆ ಸರ್ಕಾರ ಅಭಿಪ್ರಾಯ ಬಹಿರಂಗ ಮಾಡಬೇಕು. ಅದು ಕಳಪೆ ಆಗಿದ್ದರೆ ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಈ ಸೇತುವೆಯನ್ನು ಒಡೆದುಹಾಕಬೇಕಿತ್ತು. ಈ ಪ್ರಕ್ರಿಯೆ ಆಗದೆ ಇನ್ನೊಂದು ಸೇತುವೆಗೆ ₹ 2 ಕೋಟಿ ಅನುದಾನ ಕೊಟ್ಟಿರುವುದರು ಜನರ ತೆರಿಗೆ ಹಣದ ದುರ್ಬಳಕೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ.

'ಒಂದು ಸೇತುವೆ ಇದ್ದಾಗಲೇ ಇನ್ನೊಂದು ಸೇತುವೆಗೆ ಅಂದಾಜು ವೆಚ್ಚ ಮಾಡಿ ಅನುಮೋದನೆಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಕಾನೂನು ಪ್ರಕಾರ ಅನುಮೋದನೆ’

ಮುಂಡುಗದಮನೆಗೆ ಸರ್ವಋತು ರಸ್ತೆ ಮತ್ತು ಸೇತುವೆ ಬೇಕು ಎಂಬ ಸ್ಥಳೀಯರ ಒತ್ತಾಯದ ಕಾರಣಕ್ಕೆ 5.5 ಮೀಟರ್ ಅಗಲದ ಸೇತವೆ ನಿರ್ಮಾಣ ಆರಂಭಿಸಲಾಗಿದೆ. ಈ ಕಾಮಗಾರಿಯನ್ನು ಹೊರನಾಡು ಪಂಚಾಯಿತಿ ಮತ್ತು ಶಾಸಕರ ಒತ್ತಾಸೆ ಮೇರೆಗೆ ಕೈಗೊಳ್ಳಲಾಗಿದೆ. ಕಾನೂನು ಪ್ರಕಾರ ಎಲ್ಲ ಅನುಮೋದನೆ ಪಡೆಯಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.